ಗ್ರಾಮದಲ್ಲಿ ಶಾಂತಿ ಕಾಪಾಲು ಒತ್ತಾಯಿಸಿ ಪ್ರತಿಭಟನೆ

ಚನ್ನಪಟ್ಟಣ.ಸೆ೧೯:ತಾಲ್ಲೂಕಿನ ಮಾಳಗಾಳು ಗ್ರಾಮದಲ್ಲಿ ದೇವಸ್ಥಾನದ ಬೀಗದ ಕೀ ವರ್ಗಾವಣೆ ವಿಚಾರದಲಿ ಉಪ ವಿಭಾಗಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ, ಅಧಿಕಾರಿಗಳ ಹೆಸರುಗಳನ್ನು ಬಳಸುತ್ತಾ ಸ್ವಾರ್ಥ ಸಾಧನೆಗಾಗಿ ಗ್ರಾಮಸ್ಥರ ಅಶಾಂತಿಗೆ ಕಾರಣವಾಗಿರುವವರ ವಿರುದ್ಧ ಹಾಗೂ ಸಮಸ್ಯೆ ಬಗೆಹರಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಒತ್ತಾಯಿಸಿ ಶ್ರೀ ಚಿಕ್ಕಮ್ಮ, ದೊಡ್ಡಮ್ಮ, ಕೆಂಪಮ್ಮ ದೇವಸ್ಥಾನದ ವಂಶಸ್ಥರು ಹಾಗೂ ನೊಂದ ಗ್ರಾಮಸ್ಥರು ದೇವಸ್ಥಾನಕ್ಕೆ ಬೀಗ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ದೇವಸ್ಥಾನದ ವಂಶಸ್ಥರು, ಅರ್ಚಕರು ಆದ ಪೂಜಾರಿ ಅಂಕಯ್ಯನವರ ಮಗ ಅರ್ಚಕ ಕೆ.ನಾಗರಾಜು ಅವರು ಮಾತನಾಡಿ, ತಾಲ್ಲೂಕಿನ ಮಾಳಗಾಳು ಗ್ರಾಮದಲ್ಲಿ ಚಿಕ್ಕಮ್ಮ, ದೊಡ್ಡಮ್ಮ, ಕೆಂಪಮ್ಮ ದೇವಸ್ಥಾನವಿದ್ದು ನಮ್ಮ ಪೂರ್ವಿಕರ ಕಾಲದಿಂದಲೂ ನಾಲ್ಕು ವಂಶಸ್ಥರು ಪೂಜಾರಿಕೆ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ. ಎ.ಸಿ.ಯವರ ಆದೇಶದಂತೆ ೨೦೧೯ ಯುಗಾದಿ ಯಿಂದ ೨೦೨೩ರ ಯುಗಾದಿ ವರೆಗೆ ಸರದಿಯಂತೆ ಮೂರು ವಂಶಸ್ಥರ ಸರದಿಯಂತೆ ಪೂಜಾರಿ ಕಾರ್ಯ ಮುಗಿದಿದ್ದು, ಎ.ಸಿ. ಯವರ ಆದೇಶದಂತೆ ಸರದಿಯಂತೆ ಮೊದಲನೆಯ ದೊಲಯ್ಯನ ವಂಶಕ್ಕೆ ಪೂಜಾರಿಕೆ ಕಾರ್ಯ ಬಂದಿದ್ದು, ಎ.ಸಿ. ಯವರ ಆದೇಶದಂತೆ ದೇವಸ್ಥಾನದ ಕೀ ಕೊಡಬೇಕಾಗಿತ್ತು.
ಕೊಡದೇ ಮೂಲ ವಂಶಸ್ಥರಿಗೆ ವಂಚನೆ ಮಾಡುವುದರ ಜೊತೆಗೆ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಿದೆ ಎಂದು ಅವರು ದೂರಿದರು.
ಈ ಸಂಬಂಧ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಲ್ಲಿ ನಿವೇಧಿಸಿಕೊಂಡು ಎ.ಸಿ ಆದೇಶದಂತೆ ದೇವಸ್ಥಾನದ ಕೀ ಕೊಡಿಸಿಕೊಟ್ಟು ದೇವಸ್ಥಾನದ ಪ್ರಜಾರಿಕೆ ಕಾರ್ಯಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರೆ, ಗಾಮದ ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಿ ಇದು ಸಿವಿಲ್ ಮ್ಯಾಟರ್, ನಮಗೆ ಸಂಬಂಧಿಸಿದಲ್ಲ.
ಗ್ರಾಮದಲ್ಲಿ ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಕೈಚೆಲ್ಲಿದ್ದಾರೆ. ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದನ್ನು ಪ್ರತಿಭಟಿಸಿ ಗ್ರಾಮದ ದೇವಸ್ಥಾನಕ್ಕೆ ನಾವೇ ಒಂದು ಬೀಗ ಹಾಕಿ ದೇವಸ್ಥಾನದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಅಹವಾಲನ್ನು ಕೇಳಿ ಸಮಸ್ಯೆ ಬಗೆಹರಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಕೊಡಬೇಕೆಂದು ಗ್ರಾಮದ ನೊಂದ ಜನತೆ ಹಾಗೂ ವಂಶಸ್ಥರು ಮನವಿ ಮಾಡಿದ್ದಾರೆ.