ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸಬೇಕೆಂದು ಸಾರ್ವಜನಿಕರ ಆಗ್ರಹ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ, 15. ಸಿರಿಗೇರಿ ಗ್ರಾಮದಲ್ಲಿ ಎಲ್ಲಾ ವಾರ್ಡುಗಳಲ್ಲಿನ ಸಾರ್ವಜನಿಕ ಚರಂಡಿಗಳನ್ನು ಸ್ವಚ್ಚಗೊಳಿಸಿ ಅನೇಕ ತಿಂಗಳುಗಳಾಗಿದ್ದು, ಇಲ್ಲಿಯವರೆಗೆ ಚರಂಡಿ ಸ್ವಚ್ಚಗೊಳಿಸುವ ಕೆಲಸಕ್ಕೆ ಚಾಲನೆ ನೀಡುತ್ತಿಲ್ಲ. ಇದರಿಂದ ಗ್ರಾಮದಲ್ಲಿನ ಚರಂಡಿಗಳು ತುಂಬಿಕೊಂಡು ಕೊಳೆತ ನೀರಿನಿಂದ, ಮಾರಕ ರೋಗ ತರುವ ಬ್ಯಾಕ್ಟೀರಿಯಾ, ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ಕೆಲ ವಾರ್ಡುಗಳಲ್ಲಿ ಚರಂಡಿಗಳು ಮುಂದಕ್ಕೆ ಹರಿದು ಹೋಗದೇ ನೀರು ನಿಂತು ಚಿಕ್ಕಚಿಕ್ಕ ಹೊಂಡಗಳಾಗುತ್ತಿವೆ. ಇವುಗಳಿಂದ ಕೋಟ್ಯಾನುಕೋಟಿ ಸೊಳ್ಳೆಗಳು ಉತ್ಪತ್ತಿಗೊಂಡು ಸಂಜೆಯಾದರೆ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಸೊಳ್ಳೆ ಕಡಿತದಿಂದ ಜನರು ಜ್ವರ, ತಲೆನೋವು, ನೆಗಡಿ ಬಾದೆಗಳಿಂದ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ನೀರು ನಿಂತು ಮನೆಗಳ ಮುಂದೆ ಕುಳಿತುಕೊಳ್ಳಲಾಗುತ್ತಿಲ್ಲ. ದುರ್ವಾಸನೆಯಿಂದ ಉಚಿತ ತಲೆನೋವು ಮಾಮೂಲಿಯಾಗಿದೆ. ಕಳೆದೆರಡು ತಿಂಗಳಿನಿಂದ ಚರಂಡಿಗಳನ್ನು ಸ್ವಚ್ಚಗೊಳಿಸುವಂತೆ ಗ್ರಾಮಾಡಳಿತಕ್ಕೆ ಮನವಿ ಮಾಡಿದರೂ, ಈ ತಿಂಗಳು, ಮುಂದಿನ ತಿಂಗಳು, ಮುಂದಿನ ವಾರದಿಂದ, ನಾಳೆಯಿಂದ ಪ್ರಾರಂಭ ಮಾಡಲಾಗುತ್ತದೆ ಎಂದು ಸಿದ್ದ ಉತ್ತರಗಳನ್ನು ನೀಡುವುದೇ ಆಗಿದೆ ಹೊರತು ಸ್ವಚ್ಚಗೊಳಿಸುವ ಕೆಲಸವಾಗುತ್ತಿಲ್ಲವೆಂದು ಸಾರ್ವಜನಿಕರು ದೂರುತ್ತಿದ್ದಾರೆ. ಈಗ ದೊಡ್ಡ ಹಬ್ಬವಾದ ಯುಗಾದಿ ಮತ್ತು ಗ್ರಾಮದ ಜಾತ್ರೆಗಳು ಸಮೀಪಿಸಿದ್ದು, ಕೂಡಲೇ ಚರಂಡಿಗಳನ್ನು ಸ್ವಚ್ಚಗೊಳಿಸಿ, ಚರಂಡಿಗಳ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಗ್ರಾಮದ ನೈರ್ಮಲ್ಯ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಪಡಿಸುತ್ತಿದ್ದಾರೆ.