ಗ್ರಾಮದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ

ಹಾರೋಹಳ್ಳಿ,ಮಾ.೩-ತಾಲ್ಲೂಕಿನ ಮರಳವಾಡಿ ಹೋಬಳಿ ಸಿಡಿ ದ್ಯಾವರಹಳ್ಳಿ ಗ್ರಾಮದಲ್ಲಿ ೧೧ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ಗ್ರಾಮದ ಜನತೆಯಲ್ಲಿ ಆತಂಕ ಸೃಷ್ಟಿಸಿದವು.
ಹಿಂದೆ ನಾವು ಆನೆಗಳನ್ನು ನೋಡಲು ಸರ್ಕಸ್ಸು, ಇಲ್ಲವೇ ಮೈಸೂರು ಜೂಗೆ ಹೋಗಬೇಕಿತ್ತು, ಆದರೆ ಈಗ ಆನೆಗಳು ಇಂದು ಹಿಂಡು ಹಿಂಡಾಗಿ ಗ್ರಾಮಗಳಲ್ಲಿ ಕಾಣಿಸಿಕೊಂಡು ಕುರಿ ಮೇಕೆಗಳ ರೀತಿಯಲ್ಲಿ ಜಮೀನುಗಳಲ್ಲಿ ಓಡಾಡುತ್ತಿವೆ.
ಆನೆಗಳ ಹಿಂಡು ಗ್ರಾಮದ ಪಕ್ಕದಲ್ಲಿನ ಮಾವಿನ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಗ್ರಾಮಕ್ಕೆ ಬಂದು ಆನೆಗಳನ್ನು ಕಾಡಿಗೆ ಓಡಿಸುವ ಪ್ರಯತ್ನ ನಡೆಸಿದರು. ಒಂದು ಕಡೆ ಓಡಿಸಿದರೆ ಆನೆಗಳು ಬಳಸಿಕೊಂಡು ಮತ್ತೊಂದು ಜಮೀನಿನಲ್ಲಿ ಬರುತ್ತಿದ್ದವು,
ಆದರೂ ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟು ಆನೆಗಳನ್ನು ಅಂತಿಮವಾಗಿ ದುರ್ಗದಕಲ್ಲು ಬೆಟ್ಟಕ್ಕೆ ಓಡಿಸಿದ್ದಾರೆ. ಎಸಿಎಫ್ ವಿಶಾಲ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ರಾಜಕುಮಾರ್ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿದರು.
ಆನೆಗಳನ್ನು ಕಾಡಿಗೆ ಓಡಿಸುವ ಸಂದರ್ಭದಲ್ಲಿ ಗ್ರಾಮದ ಜನತೆ ಭಯವನ್ನು ಬಿಟ್ಟು ಅರಣ್ಯ ಅಧಿಕಾರಿಗಳ ಜೊತೆ ಜೊತೆಯಲ್ಲೇ ಹೋಗಿ ಆನೆಗಳನ್ನು ಓಡಿಸಿದ್ದು ಕಂಡು ಬಂದಿತು.