ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

(ಸಂಜೆವಾಣಿ ವಾರ್ತೆ)
ಬೀದರ: ಡಿ.6:’ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರವು ಪ್ರಥಮ ಆದ್ಯತೆ ನೀಡುತ್ತಿದೆ. ಪಕ್ಷದ ಆದರ್ಶ ಮತ್ತು ತತ್ವಗಳು ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಘಾಳೆ ಫಂಕ್ಷನ್ ಹಾಲ್‍ನಲ್ಲಿ ಭಾನುವಾರ ಆಯೋಜಿಸಿದ್ದ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು, ‘ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗೆ ಜನ ಅಲೆಯುವುದನ್ನು ತಪ್ಪಿಸಿ ಗ್ರಾಮ ಮಟ್ಟದಲ್ಲಿ ಜನರಿಗೆ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಬೀದರ್ ರಾಜ್ಯದ, ಕನ್ನಡಾಂಬೆಯ ಕಿರೀಟ. ಸಮಗ್ರ ಅಭಿವೃದ್ಧಿಯಾದರೆ ಕಿರೀಟಕ್ಕೆ ಇನ್ನಷ್ಟು ಮಹತ್ವ ಬರುತ್ತದೆ. ಗ್ರಾಮಗಳ ಸಶಕ್ತೀಕರಣ ಆಗಬೇಕು. ಮಹಾತ್ಮಾ ಗಾಂಧೀಜಿ ಅವರು ಗ್ರಾಮ ರಾಜ್ಯದ ಬಗ್ಗೆ ಮಾತನಾಡಿದ್ದರು’ ಎಂದು ಉಲ್ಲೇಖಿಸಿದರು.
‘ಒಬಿಸಿ, ಎಸ್‍ಸಿ,ಎಸ್‍ಟಿ ಮಹಿಳೆಯರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಬೀದರ್‍ನಿಂದಲೇ ಅಭಿವೃದ್ಧಿ ಪರ್ವ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.
’78 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಇದೆ. ಪಿಕೆಪಿಎಸ್ ಮೂಲಕ ಗ್ರಾಮ ಮಟ್ಟದಲ್ಲೇ ಉದ್ಯೋಗ ಕಲ್ಲಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರದ ಲಕ್ಷ್ಮ್ಯ ಗ್ರಾಮದ ಮೇಲೆ ಇದೆ’ ಎಂದು ಅವರು ತಿಳಿಸಿದರು.
ಕೇಂದ್ರದ ರಸ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ‘ಕಾಂಗ್ರೆಸ್ ಕೇವಲ ಶಿಲಾನ್ಯಾಸ ನೆರವೇರಿಸಿ ಹೋಗಿದ್ದಾರೆ. ಬಿಜೆಪಿ ಆ ಕಾಮಗಾರಿಗಳನ್ನು ಪೂರ್ಣ ಮಾಡಿದೆ. ಕಾಂಗ್ರೆಸ್ ಕೇವಲ ಹಣದ ಹೊಳೆ ಹರಿಸುತ್ತಿದೆ. ಆದರೆ. ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಟೀಕಿಸಿದರು.
‘ಹುಮನಾಬಾದ್ ಶಾಸಕರು ಪ್ರಚಾರ ಸಭೆಯಲ್ಲಿ ಕನ್ನಡಕ ಉಲ್ಲೇಖಿಸಿ ಹಣದ ದರ್ಪ ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಮಾತನಾಡಿ, ‘ಕಾಂಗ್ರೆಸ್‍ನವರು ಒಣ ಮಾತು ಹೇಳಿ ಸಮಯ ಕಳೆದರು. ಆದರೆ, ಬಿಜೆಪಿ ಅಭಿವೃದ್ಧಿಯ ಮೂಲಕ ಮಾತನಾಡುತ್ತಿದೆ. ಬೀದರ್‍ನಿಂದ ನಾಗರಿಕ ವಿಮಾನ ಸೇವೆ ಆರಂಭಿಸಿದ್ದೇ ಬಿಜೆಪಿ ಎನ್ನವುದು ಎಲ್ಲರಿಗೂ ತಿಳಿದಿದೆ. ಇನ್ನಷ್ಟು ಅಭಿವೃದ್ಧಿ ಮಾಡಲು ಪ್ರಕಾಶ ಖಂಡ್ರೆ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಹಾಗೂ ನನ್ನ ನಡುವೆ 25 ವರ್ಷಗಳ ಸಂಬಂಧ ಇದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಮನವರಿಕೆ ಮಾಡಿದರು.
ಸುರಪುರ ಶಾಸಕ ರಾಜು ಗೌಡ ಮಾತನಾಡಿ, ‘ಕಾಂಗ್ರೆಸ್ ಬ್ರಿಟಿಷರಗಿಂತ ಅಪಾಯ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಎಚ್ಚರ ವಹಿಸಬೇಕು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು’ ಎಂದು ಕೋರಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಕೆಎಸ್‍ಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರೌಫೆÇೀದ್ದಿನ್ ಕಚೇರಿವಾಲೆ, ಬಿಜೆಪಿ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬುಡಾ ಅಧ್ಯಕ್ಷ ಬಾಬು ವಾಲಿ, ಮುಖಂಢರಾದ ಸುಭಾಷ ಕಲ್ಲೂರ್, ಬಿಜೆಪಿ ಮುಖಂಡರಾದ ಗುರುನಾಥ ಕೊಳ್ಳೂರ, ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ.ಸಿದ್ರಾಮ, ಶಿವರಾಜ ಗಂದಗೆ, ಹಣಮಂತ ಬುಳ್ಳಾ, ಅಶೋಕ ಹೊಕ್ರಾಣೆ, ಗುರುನಾಥ ಜ್ಯಾಂತಿಕರ್, ಜಯಕುಮಾರ ಕಾಂಗೆ, ಬಾಬುರಾವ್ ಕಾರಭಾರಿ, ಸಿದ್ಧು ಪಾಟೀಲ ಇದ್ದರು. ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
*ಕಲ್ಯಾಣ ಕರ್ನಾಟಕ ಜನರ ಸಮಸ್ಯೆಗೆ ಪರಿಹಾರ ಕೊಡಿಸುವ ಕೆಲಸವನ್ನು ಪ್ರಕಾಶ ಖಂಡ್ರೆ ಅವರು ಮಾಡಲಿದ್ದಾರೆ. ಅವರಿಗೆ ಮತದಾರರು ಬೆಂಬಲಿಸಬೇಕು-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ’ಅಭಿವೃದ್ಧಿಯ ವೇಗಕ್ಕೆ ಮತ ಚಲಾಯಿಸಿ’
ಔರಾದ್: ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿಯ ವೇಗ ಹೆಚ್ಚಿಸಲು ಪ್ರಕಾಶ ಖಂಡ್ರೆ ಅವರನ್ನು ಬೆಂಬಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಈಚೆಗೆ ತಾಲ್ಲೂಕಿನ 11 ಪಂಚಾಯಿತಿಗಳಿಗೆ ಭೇಟಿ ನೀಡಿ ಮತದಾರರ ಸದಸ್ಯರಿಗೆ ಅವರು ಕೋರಿದರು.’ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಳ ವ್ಯಕ್ತಿತ್ವದ ಉತ್ತಮ ಆಡಳಿತಗಾರರು. ಗ್ರಾಮ ಮಟ್ಟದಲ್ಲಿ ನೆರವೇರಬೇಕಾದ ಮಹತ್ವದ ಕೆಲಸದ ಬಗ್ಗೆ ಅವರಿಗೆ ತಿಳಿಸಿದೆ. ಹೀಗಾಗಿ, ಅವರ ಕೈ ಬಲಪಡಿಸಬೇಕಾದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನ ಪರಿಷತ್ತಿಗೆ ಕಳುಹಿಸಬೇಕು’ ಎಂದು ಹೇಳಿದರು.
ಬಾದಲಗಾಂವ, ಸುಂದಾಳ, ನಾಗಮಾರಪಳ್ಳಿ, ಚಿಂತಾಕಿ, ಗುಡಪಳ್ಳಿ, ವಡಗಾಂವ, ಚಿಕ್ಲಿ(ಜೆ), ಜಂಬಗಿ, ಜೋಜನಾ, ಸಂತಪುರ, ಎಕಲಾರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಭೆ ನಡೆಸಿ ಮತದಾರ ಸದಸ್ಯರ ಮನವೊಲಿಸುವ ಯತ್ನ ಮಾಡಿದರು.
ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಕೇರಬಾ ಪವಾರ್, ಸಂತೋಷ, ಅಶೋಕ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಯಾದವರಾವ ಮೇತ್ರೆ, ಸಂತೋಷ ಖಾನಾಪೂರೆ, ಬಿ.ಕೆ ನಾಯಕ್, ಬಾಬು ರಾಠೋಡ್, ಶಿವಾಜಿ ರಾಠೋಡ್, ರೋಪಸಿಂಗ ರಾಠೋಡ್ ಇದ್ದರು.