ಗ್ರಾಮಗಳ ವಿಕಾಸದತ್ತ ಮುನ್ನಡೆಯಿರಿ : ಸೂರ್ಯಕಾಂತ ಬಿರಾದಾರ

ಭಾಲ್ಕಿ:ಆ.5: ತಾಲೂಕಿನ ಎಲ್ಲಾ ಗ್ರಾ.ಪಂ. ಅಧ್ಯಕ್ಷರುಗಳು ಗ್ರಾಮಗಳ ವಿಕಾಸದತ್ತ ಮುನ್ನಡೆಯಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಹೇಳಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಲಕ್ಷ್ಮೀನಾರಾಯಣ ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ನಡೆದ ಗ್ರಾ.ಪಂ. ಎಸ್.ಸಿ/ಎಸ್.ಟಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಗಳ ವಿಕಾಸವೇ ಭಾರತದ ವಿಕಾಸವಾಗಿದೆ. ಹೀಗಾಗಿ ಎಲ್ಲಾ ಗ್ರಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಸದಾ ಗ್ರಾಮಗಳ ಅಭಿವೃದ್ಧಿ ಮತ್ತು ವಿಕಾಸದತ್ತ ಮುನ್ನಡೆಯಬೇಕು ಅಂದಾಗ ಮಾತ್ರ ಎಲ್ಲರೂ ಚುನಾಯಿತರಾಗಿ ಸಾರ್ವಜನಿಕ ವಲಯದಲ್ಲಿ ಸಾರ್ಥಕತೆ ಕಂಡು ಕೊಂಡಂತಾಗುತ್ತದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ಸತೀಶಕುಮಾರ ಸಂಗಣ್ಣ, ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ತಮ್ಮ ವೈಯಕ್ತಿಕ ವೈಮನಸ್ಸುಗಳನ್ನು ಬದಿಗೊತ್ತಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಿಶುಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಬಾಲವಾಲೆ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕಾರ್ಯನಿರ್ವಹಣೆಯ ಬಗ್ಗೆ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕರಾದ ವಿಲಾಸ ಅರ್ಜುನರಾವ ಮೋರೆ, ಬಸವರಾಜ ಲಂಜವಾಡೆ, ಪ್ರವೀಣ ಮೋರೆ, ಬಾಬುರಾವ ಮೊಳಕೇರೆ, ಸಂಜುಕುಮಾರ, ಸುಭಾಷ ತ್ಯಾಗವೀರ, ಆನಂದ, ಮಹೇಂದ್ರ ಪ್ಯಾಗೆ, ವೈಜಿನಾಥ ತರನಳ್ಳಿ, ರಮೇಶ ಬೆಲ್ದಾರ, ಮಾರುತಿ ಸಿಂಗೆ, ರಾಜಕುಮಾರ ಭಟಾರೆ, ಡಿ.ಪಿ.ಶರ್ಮಾ, ಸಂಜುಕುಮಾರ ಕಾಂಬಳೆ ಉಪಸ್ಥಿತರಿದ್ದರು. ಇದೇವೇಳೆ ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ಎಸ್.ಸಿ/ಎಸ್.ಟಿ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತಗಾರ ಪ್ರಭು ಕಾಂಬಳೆಯವರಿಂದ ಸುಗಮ ಸಂಗೀತ ನಡೆಯಿತು. ಸಂಘದ ಘಾಳೆಪ್ಪಾ ಮೈಲೂರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಪತ್ರಕರ್ತ ದಿಲೀಪಕುಮಾರ ವಂದಿಸಿದರು.