ಗ್ರಾಮಗಳ ದತ್ತು ಸ್ವೀಕಾರಕ್ಕೆ ಖಾಸಗಿ ವೈದ್ಯರಿಗೆ ಡಿಸಿ ಮನವಿ

ದಾವಣಗೆರೆ ಮೇ. 20; ಕೋವಿಡ್ ಸೋಂಕು ಗ್ರಾಮ ಮಟ್ಟದಲ್ಲಿ ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮಗಳನ್ನು ದತ್ತು ಪಡೆದು, ಸತತ 10 ದಿನಗಳ ಕಾಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ರೋಗಪತ್ತೆ, ಚಿಕಿತ್ಸೆ ನಿರ್ಧರಣೆಗೆ ಜಿಲ್ಲೆಯಲ್ಲಿರುವ ಖಾಸಗಿ ವೈದ್ಯರು ಸಹಕರಿಸುವ ಮೂಲಕ ಜಿಲ್ಲೆಯ ಋಣ ತೀರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮನವಿ ಮಾಡಿದರು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್ ಸೋಂಕಿತರ ಆರೋಗ್ಯ ಮೇಲ್ವಿಚಾರಣೆ ಮಾಡುವ ಸಂಬಂಧ ವೈದ್ಯರುಗಳ ನಿಯೋಜನೆ ಕುರಿತಂತೆ  ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅನೇಕರು ನಮ್ಮ ಕಣ್ಣಮುಂದೆಯೇ ಮರೆಯಾಗುತ್ತಿದ್ದಾರೆ. ಸದ್ದಿಲ್ಲದೆ ಸೋಂಕು, ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೆ ಬಹಳಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಕಾರಣ ಹೋಂ ಐಸೋಲೇಷನ್‌ನ ಅಸಮರ್ಪಕ ವ್ಯವಸ್ಥೆ. ಹಳೆ ದಾವಣಗೆರೆ ಪ್ರದೇಶದಲ್ಲಿ ಜನರು ಸೋಂಕಿನ ಭೀತಿಯಿಲ್ಲದೆ, ನಿತ್ಯವೂ ಅಗತ್ಯ ವಸ್ತಗಳ ಖರೀದಿ ನೆಪದಲ್ಲಿ ಜನಸಂದಣಿಯಲ್ಲಿ ಬೆರೆಯುವುದು ಕಂಡುಬರುತ್ತಿದ್ದು, ಯಾವಾಗ ಸೋಂಕು ಸ್ಫೋಟಗೊಳ್ಳುತ್ತದೆಯೋ ಎನ್ನುವ ಆತಂಕವಿದೆ. ದಾವಣಗೆರೆ ಜಿಲ್ಲೆ ವೈದ್ಯಕೀಯ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿಯೇ ಖ್ಯಾತಿ ಹೊಂದಿದೆ. ಅನೇಕಾನೇಕ ತಜ್ಞ ವೈದ್ಯರುಗಳು ಜಿಲ್ಲೆಯಲ್ಲಿದ್ದು, ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ದೇಶದಲ್ಲಿ ಈ ಹಿಂದೆ ಸಂಭವಿಸಿದ ಲಾತೂರ್ ಭೂಕಂಪ, ಕಂಡು ಕೇಳರಿಯದ ಪ್ರವಾಹ, ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಸಂದರ್ಭಗಳಲ್ಲಿ ಜಿಲ್ಲೆಯ ಖಾಸಗಿ ವೈದ್ಯರ ತಂಡ, ದುರಂತ ಸ್ಥಳಗಳಿಗೆ ತೆರಳಿ, ಜನರ ಪ್ರಾಣ ರಕ್ಷಣೆ ಮಾಡಿದ ನಿದರ್ಶನವಿದ್ದು, ಹೀಗಾಗಿ ಜಿಲ್ಲೆಯ ವೈದ್ಯರ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ವೇಗವಾಗಿ ವ್ಯಾಪಿಸುತ್ತಿದ್ದು, ಜಿಲ್ಲೆ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ. ಲಾಕ್‌ಡೌನ್ ಪರಿಣಾಮವಾಗಿ ನಗರ, ಪಟ್ಟಣಗಳಿಂದ ಗ್ರಾಮಗಳಿಗೆ ಹಿಂದಿರುಗಿದ ಜನರಿಂದ ಸೋಂಕು ವ್ಯಾಪಕವಾಗುತ್ತಿದೆ. ಗ್ರಾಮಗಳಲ್ಲಿ ಜನರಿಗೆ ರೋಗದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ಜನರು ತಪ್ಪು ಕಲ್ಪನೆ ಹಾಗೂ ಭೀತಿಯಿಂದ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ, ರೋಗ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರು ರೋಗವನ್ನು ಬೇರೆಯವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶೇ. 40 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ. ಹೀಗಾಗಿ ಕೋವಿಡ್ ಸೋಂಕಿನ ಕುರಿತು ಗ್ರಾಮೀಣ ಜನರಲ್ಲಿ ಸರಿಯಾದ ತಿಳುವಳಿಕೆ, ಅರಿವು ಮೂಡಿಸಬೇಕಿದೆ, ಇದರ ಜೊತೆಗೆ ಅವರಲ್ಲಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಅವರಲ್ಲಿ ಚಿಕಿತ್ಸೆಯ ಬಗ್ಗೆ ಹಾಗೂ ಸರ್ಕಾರ ನಿಮ್ಮೊಂದಿಗಿದೆ ಎನ್ನುವ ವಿಶ್ವಾಸವನ್ನು ಮೂಡಿಸಬೇಕಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರ ಸಹಕಾರ ಈಗ ಅತ್ಯಗತ್ಯವಾಗಿದೆ ಎಂದರು.ಸಭೆಯಲ್ಲಿ ಭಾಗವಹಿಸಿದ್ದ ನರ್ಸಿಂಗ್ ಅಸೋಸಿಯೇಷನ್, ದಂತ ವೈದ್ಯರ ಸಂಘ ಸೇರಿದಂತೆ ವಿವಿಧ ವೈದ್ಯಕೀಯ ಕ್ಷೇತ್ರಗಳ ಸಂಘಗಳ ಪ್ರತಿನಿಧಿಗಳು, ಜಿಲ್ಲಾಡಳಿತದ ಕರೆಗೆ ಸ್ಪಂದಿಸಿ, ಕೋವಿಡ್ ನಿಯಂತ್ರಣಕ್ಕೆ ಯಾವುದೇ ಸೇವೆ ಸಲ್ಲಿಸಲು ಸದಾ ಸಿದ್ಧರಿದ್ದೇವೆ ಎನ್ನುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು. ಸಭೆಯಲ್ಲಿ ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‌ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್, ಸೇರಿದಂತೆ ವಿವಿಧ ಅಧಿಕಾರಿಗಳು, ನಗರದ ವಿವಿಧ ಆಸ್ಪತ್ರೆಗಳ ವೈದ್ಯರುಗಳು ಉಪಸ್ಥಿತರಿದ್ದರು.