
ಔರಾದ್ : ಆ.8:ಗ್ರಾಮ ಪಂಚಾಯತಿ ವ್ಯಾಪಿಯಲ್ಲಿ ಜನ ಮೆಚ್ಚುವಂತೆ ಅಭಿವೃದ್ಧಿ ಮಾಡಿ, ಅದಕ್ಕಾಗಿ ಬೇಕಾದ ಪೂರಕ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಹೇಳಿದರು. ತಾಲೂಕಿನ ಬಾದಲಗಾಂವ, ಸುಂಧಾಳ, ಚಿಂತಾಕಿ, ಎಕಲಾರ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಮೂಲಕ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸತ್ಕರಿಸಿ ಮಾತನಾಡಿದರು.
ಗ್ರಾಪಂ ಅಭಿವೃದ್ಧಿಗೆ ಪೂರಕವಾಗಿ ಸರಕಾರದ ಯೋಜನೆಗಳು ಬಡವರ ಮನೆಗಳಿಗೆ ತಲುಪಿಸುವ ಕೆಲಸ ಪ್ರತಿನಿಧಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ನ್ಯಾಯ, ಎಲ್ಲ ಜಾತಿ, ಜನಾಂಗ, ಧರ್ಮದವರನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಕಾಂಗ್ರೆಸ್ ಸರಕಾರಕ್ಕಿದೆ ಎಂದರು.
ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿರುವುದು ಸರಕಾರ ಜನಪರ ಇದೆ ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿದೆ ಎಂದರು.
ಕ್ಷೇತ್ರದ ಪ್ರಜ್ಞಾವಂತ ಮತದಾರರು ತೋರಿಸಿದ ಪ್ರೀತಿಗೆ, ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಮತದಾರರು ನೇರವಾಗಿ ನನ್ನನ್ನು ಭೇಟಿಯಾಗಿ ಸಮಸ್ಯೆಗಳನ್ನು ನನ್ನ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ಜಿಪಂ ಸದಸ್ಯ ರಮೇಶ ದೇವಕತ್ತೆ, ತಾಪಂ ಮಾಜಿ ಉಪಾಧ್ಯಕ್ಷ ನೇಹರು ಪಾಟೀಲ್, ಸುಂಧಾಳ ಗ್ರಾಪಂ ಅಧ್ಯಕ್ಷ ಮಾರುತಿ ನರಸಪ್ಪ, ಬಾದಲಗಾಂವ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಆನಂದ, ಚಿಂತಾಕಿ ಗ್ರಾಪಂ ಅಧ್ಯಕ್ಷ ರಾಮರಡ್ಡಿ, ಪ್ರಕಾಶ ಶಿಂಧೆ, ಶರಣಪ್ಪ ಪಾಟೀಲ್, ಚೇತನ ಕಪ್ಪೆಕೇರೆ, ಸಂಗಪ್ಪ ಮೇರ್ತೆ, ಖಲೀಲ್ ಸಾಬ್, ಶಿವಕುಮಾರ ಪಾಟೀಲ್, ಕೃಷ್ಣ ಕಾಂಬಳೆ, ರವಿ ದೇವರೆ, ವಿಜಯಕುಮಾರ, ಸುನಿಲ ಮೀತ್ರಾ, ಸೂರ್ಯಕಾಂತ ಮಾಲೆ, ಜೈಪ್ರಸಾದ ಬೊರ್ಗಿ, ಸೂರ್ಯಕಾಂತ ಮಮದಾಪೂರ ಸೇರಿದಂತೆ ಅನೇಕರಿದ್ದರು.