ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ-ಯಾದವಾಡ

ರಾಮದುರ್ಗ,ಜ5: ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಸದಸ್ಯರು ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದಂತೆ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಕಟಕೋಳ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಯ ನೂತನ ಸದಸ್ಯರ ಸನ್ಮಾನ ಮತ್ತು ರೂ.1.70 ಕೋಟಿ ವೆಚ್ಚದಲ್ಲಿ ಕಟಕೋಳ ನಾಗರಗಾಳಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈಗಷ್ಟೇ ಚುನಾವಣೆ ಮುಗಿದಿದ್ದು ನೂತನ ಸದಸ್ಯರು ಜನ ಪರ ಕೆಲಸ ಮಾಡಿ ಮೆಚ್ಚುಗೆ ಪಡೆಯಬೇಕೆಂದರಲ್ಲದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಯಾವುದೇ ಮೀಸಲಾತಿ ಬಂದರೂ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲು ತಿಳಿಸಿದರು.
ಬಹುದಿನಗಳ ನಂತರ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಕಳಪೆಯಾದರೆ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎಸ್. ಡವಣ, ಜಿಲ್ಲಾ ಪಂಚಾಯ್ತಿ ಸದಸ್ಯ ಮಾರುತಿ ತುಪ್ಪದ, ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಅತಾರ, ಎಸ್. ಎಸ್. ಮುದೇನೂರ ಹಾಗೂ ಗ್ರಾಮ ಪಂಚಾಯತ ನೂತನ ಸದಸ್ಯರು ಉಪಸ್ಥಿತರಿದ್ದರು.