ಗ್ರಾಮಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯಕ

ಹೊನ್ನಾಳಿ.ಜ.೭; ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ 45 ಗ್ರಾಮ ಪಂಚಾಯಿತಿಗಳಲ್ಲಿ 35 ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದು, ಎರಡು-ಮೂರು ಪಂಚಾಯಿತಿಗಳು ಮಾತ್ರ ಅತಂತ್ರವಾಗಿವೆ. ಅವುಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸ್ವಯಂ ಪ್ರೇರಿತವಾಗಿ  ತಮ್ಮ ಮನೆಗೆ ಆಗಮಿಸಿ, ತಮ್ಮನ್ನು ಅಭಿನಂದಿಸಿದ ಬಳಿಕ ಅವರು ಮಾತನಾಡಿದರು.ಗೆದ್ದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದೇವೆಂದು ಹಿಗ್ಗದೇ, ಸೋತ ಅಭ್ಯರ್ಥಿಗಳು ಸೋತೆವೆಂದು ಕುಗ್ಗದೇ ಎಲ್ಲರೂ ಒಟ್ಟಾಗಿ ಹೋದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಅಧಿಕಾರ ಎಂಬುದು ನೀರ ಮೇಲಿನ ಗುಳ್ಳೆ ಇದ್ದಂತೆ. ಗೆದ್ದ ಅವಧಿಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವಂತೆ ತಿಳಿಸಿದರು.ನಮ್ಮ ನಡುವಿನ ತಿಕ್ಕಾಟದಿಂದ ಕೆಲ ಗ್ರಾಪಂಗಳು ಕೈತಪ್ಪಿವೆ. ಕಾರ್ಯಕರ್ತರು-ಮುಖಂಡರು ಭಿನ್ನಾಭಿಪ್ರಾಯ ಬದಿಗೊತ್ತಿ ಎಲ್ಲರೂ ಒಂದಾಗಿ ಕೆಲಸ ಮಾಡುವಂತೆ ಸೂಚಿಸಿದರು. ಗ್ರಾಪಂ ಚುನಾವಣೆ ಮುಂಬರುವ ಜಿಪಂ, ತಾಪಂ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ಅವುಗಳಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.