ಗ್ರಾಮಗಳು ಜಲಾವೃತ: ಟ್ರ್ಯಾಕ್ಟರ್ ಏರಿ ಜನರ ಬಳಿಗೆ ತೆರಳಿದ ಜಿಲ್ಲಾಧಿಕಾರಿ

ಮಧುಗಿರಿ, ಆ. ೬- ಜಿಲ್ಲೆಯಲ್ಲಿ ಮಳೆಯ ರೌದ್ರವಾತರ ಹೆಚ್ಚಾಗಿದ್ದು ಜಿಲ್ಲೆಯ ಕೆರೆ-ಕಟ್ಟೆ, ಜಲಾಶಯಗಳು ಮೈದುಂಬಿ ಹರಿಯುತಿವೆ. ಏಕಶಿಲಾ ನಗರಿಯ ಪುರವರ ಮತ್ತು ಕೊಡಿಗೇನಹಳ್ಳಿ ಹೋಬಳಿಯ ಕೆಲ ಗ್ರಾಮಗಳು ಮಳೆ ಮತ್ತು ಜಯಮಂಗಲಿ ನೀರಿನಿಂದ ಪ್ರವಾಹ ಭೀತಿ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಜಮೀನುಗಳು, ಮನೆ, ಶಾಲೆಗಳು ಮುಳುಗಡೆಯಾಗಿದ್ದು ತಾಲ್ಲೂಕಿನಲ್ಲಿ ಮಳೆಯಿಂದ ಸುಮಾರು ೪೦ ಕುರಿಗಳು ಮೃತಪಟ್ಟಿವೆ. ವೀರಾಪುರ, ಕೆಂಪಾಪುರ, ತಿಗಳರಹಳ್ಳಿ, ಸೂರನಾಗೇನಹಳ್ಳಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಪುರವರ ಹೋಬಳಿಯ ಚನ್ನಸಾಗರ, ಇಮ್ಮಡಗೊಂಡನಹಳ್ಳಿ, ಕೋಡ್ಲಾಪುರ, ಕೊಡಿಗೇನಹಳ್ಳಿ ಹೋಬಳಿಯ ಸೂರನಾಗೇನಹಳ್ಳಿ, ಸಿ ವೀರಾಪುರ, ಕಾಳೇನಹಳ್ಳಿ, ರೆಡ್ಡಿಹಳ್ಳಿ ಗ್ರಾಮಗಳು ಜಲಾವೃತಗೊಂಡಿವೆ ಸಂಚಾರ ಬಂದ್ ಮಾಡಲಾಗಿದೆ.
ಕೋಡ್ಗದಾಲ ಕೆರೆ ಬಿರುಕು
ಇತ್ತೀಚಿಗೆ ಸುರಿದ ಮಳೆಯಿಂದ ತಾಲ್ಲೂಕಿನ ಕೋಡಗದಾಲ ಕೆರೆ ಕಟ್ಟೆ ಬಿರುಕು ಬಿಟ್ಟಿದ್ದು ಮಣ್ಣಿನ ಮೂಟೆಗಳ ಮೂಲಕ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕೊರಟಗೆರೆಯಲ್ಲಿ ಮಳೆಯಾದ ಕಾರಣ ನೀರಿನ ಸಂಗ್ರಹ ಹೆಚ್ಚಳವಾಗಿದ್ದು ನೀರಿನ ಒತ್ತಡ ನಿಯಂತ್ರಿಸಲು ಕೋಡಿ ಒಡೆದು ಜಯಮಂಗಲಿ ನದಿಗೆ ನೀರು ಬಿಡಲಾಗುತ್ತಿದ್ದು ನದಿಯಲ್ಲಿ ನೀರು ಹರಿವು ಹೆಚ್ಚಾಗತೊಡಗಿದೆ.. ತುರ್ತು ಪರಸ್ಥಿತಿ ಎದುರಾದರೆ ತಾಲ್ಲೂಕು ಆಡಳಿತ ಸಹಾಯವಾಣಿ ಆರಂಭಿಸಿದ್ದು ಸಂತ್ರಸ್ಥರಿಗೆ ನೆರವು ಬೇಕಾದಲ್ಲಿ ೯೧೦೮೩೬೬೨೦೨ ಗೆ ಸಂಪರ್ಕಿಸಬಹುದಾಗಿದೆ. ಚನ್ನಸಾಗರ ಹಾಗೂ ಕೊಡಿಗೇನಹಳ್ಳಿಯಲ್ಲಿ ಕಾಳಜಿ ಕೇಂದ್ರಕ್ಕೆ ಹಿಂದುಳಿದ ಕಲ್ಯಾಣ ವರ್ಗದ ಅಧಿಕಾರಿ ಜಯರಾಂ ನೇಮಕವಾಗಿದ್ದು ೧೦೦ಕ್ಕು ಹೆಚ್ಚುನ ಜನ ಆಶ್ರಮ ಪಡೆದಿದ್ದಾರೆ, ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಕಾಳಾಜಿ ಕೇಂದ್ರ ಇನ್ನೇರಡು ದಿನ ಮುಂದುವರೆಸಲಾಗುವುದು ಎಂದು ತಹಶಿಲ್ದಾರ್ ತಿಳಿಸಿದ್ದಾರೆ.
ಮಳೆಯಿಂದ ಹಾನಿಯಾದ ಮಾಹಿತಿ ತಿಳಿದ ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ಕೊಡಿಗೇನಹಳ್ಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ತಕ್ಷಣ ಟ್ರ್ಯಾಕ್ಟರ್ ಮೂಲಕ ಸೂರನಾಗೇನಹಳ್ಳಿಯ ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ನಂತರ ರೆಡ್ಡಿಹಳ್ಳಿಯಲ್ಲಿ ಚದುರಿದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಣ, ಕಂದಾಯ ಇಲಾಖಾಧಿಕಾರಿಗಳು, ಪೊಲೀಸ್ ಇಲಾಖಾಧಿಕಾರಿಗಳು ಇದ್ದರು.