ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಅಧಿಕಾರಿಗಳಿಗೆ ಓಲೇಕಾರ ಸೂಚನೆ

ಹಾವೇರಿ:ಏ.28: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷರು ಹಾಗೂ ಶಾಸಕರಾದ ನೆಹರು ಓಲೇಕಾರ ಅವರು ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಸಭಾಭವನದಲ್ಲಿ ಜರುಗಿದ ಹಾವೇರಿ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಎಲ್ಲ ಗ್ರಾಮ ಪಂಚಾಯತ್‍ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮಗಳಲ್ಲೂ ಪರಿಣಾಮಕಾರಿಯಾಗಿ ಲಾಕ್‍ಡೌನ್ ಅನುಷ್ಠಾನಗೊಳ್ಳಬೇಕು. ಗ್ರಾಮದಿಂದ ಗ್ರಾಮಕ್ಕೆ ಅನಗತ್ಯವಾಗಿ ಓಡಾಟ ನಿರ್ಭಂದಿಸಬೇಕು. ಗ್ರಾಮದ ಕಟ್ಟೆಗಳಲ್ಲಿ ಗುಂಪುಗೂಡಿ ಹರಟೆಹೊಡೆಯುವುದನ್ನು ತಡೆಯಬೇಕು. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯಿಂದ ಗ್ರಾಮಗಳಿಗೆ ಬರುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು. ಕೋವಿಡ್ ತಪಾಸಣೆಗೊಳಪಡಿಸಬೇಕು. ಒಂದೊಮ್ಮೆ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಬೇಕು. ಪಾಸಿಟಿವ್ ವ್ಯಕ್ತಿಗಳ ಸಂಪರ್ಕವನ್ನು 24 ತಾಸಿನಗೊಳಗೆ ಪತ್ತೆಹಚ್ಚಿ ತಪಾಸಣೆಗೊಳಪಡಿಸಲು ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಿದರು.
ಜಾಗೃತಿ ಮೂಡಿಸಿ: ಪ್ರತಿ ಗ್ರಾಮದಲ್ಲೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕಧರಿಸಲು ಅರಿವು ಮೂಡಿಸಬೇಕು. ಗುಂಪುಗೂಡದಂತೆ ಡಂಗೂರ ಸಾರಿಸಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಕಷಾಯ ಹಾಗೂ ಬಿಸಿನೀರು ಕುಡಿಯಲು ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಯಾರಿಗಾದರು ಜ್ವರ, ತಲೆನೋವು ಕಾಣಿಸಿಕೊಂಡರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಗ್ರಾಮಸ್ಥರಿಗೆ ತಿಳಿಹೇಳುವ ಕೆಲಸವನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಮಾಡಬೇಕು. ಗ್ರಾಮದಲ್ಲಿನ ಕೋವಿಡ್ ಸೋಂಕಿತರನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು. ಸೋಂಕಿತರ ಮನೆ, ಓಣಿಯನ್ನು ಸ್ಯಾನಿಟೈಸ್ ಮಾಡಿಸಬೇಕು. ಮಾರ್ಗಸೂಚಿಯಂತೆ ಮೈಕ್ರೋ ಕಂಟೈನ್ ಮೆಂಟ್ ವಲಯವಾಗಿ ಘೋಷಿಸಿ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಬಸಾಪೂರ ಸೇರಿದಂತೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸ್ವಚ್ಛತೆ, ರೋಗಿಗಳ ಆರೈಕೆ ಹಾಗೂ ಊಟದ ವ್ಯವಸ್ಥೆ ಮತ್ತು ತ್ಯಾಜ್ಯಗಳ ನಿರ್ವಹಣೆಯನ್ನು ಪ್ರೊಟೋಕಾಲ್ ಪ್ರಕಾರಕೈಗೊಳ್ಳಬೇಕು. ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.