ಗ್ರಾಮಗಳಲ್ಲಿ ಕೋವಿಡ್ ನಿಯಂತ್ರಣ ಸಕಲ ಕ್ರಮ ಕೈಗೊಳ್ಳಲು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ವಿಜಯಪುರ, ಮೇ.21-ಜಿಲ್ಲೆಯ ಹಳ್ಳಿಗಳಲ್ಲಿ ಕೋವಿಡ್-19 ಸೋಂಕು ಹರಡುತ್ತಿದ್ದು, ಸೋಂಕು ಹರಡದಂತೆ ಜಿಲ್ಲಾಡಳಿತವು ಎಲ್ಲ ಅವಶ್ಯಕ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಸೂಚಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಿನ್ನೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಕೋವಿಡ್ ಲಕ್ಷಣಗಳು ಜನರಲ್ಲಿ ಕಂಡು ಬಂದಲ್ಲಿ ಕೂಡಲೇ ಐಸೋಲೇಶನ್ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಕಡ್ಡಾಯವಾಗಿ ದಾಖಲಿಸಲು ಸೂಚಿಸಿ, ಇದರಿಂದ ಕೋವಿಡ್ ರೋಗ ಹರಡದಂತೆ ಎಚ್ಚರಿಕೆವಹಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ರೋಗಲಕ್ಷಣ ಇದ್ದವರಿಗೆ ಸೂಕ್ತ ಸಮಯದಲ್ಲಿ ಆರೋಗ್ಯ ಇಲಾಖೆ ನಿಗದಿಪಡಿಸಿದ ಔಷಧಿಯ ಕಿಟ್ ಗಳನ್ನು ಸರ್ಕಾರದಿಂದ ವಿತರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ಸೂಚಿಸಿದರು.
ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆಗಾಗಿ ಅನುಮತಿ ಕೋರಿ ಬರುತ್ತಿದ್ದು, ಈ ಹಂತದಲ್ಲಿ ಆಸ್ಪತ್ರೆಗಳಿಗೆ ಅನುಮತಿ ನೀಡಿದರೆ ಸಮಸ್ಯೆಯಾಗಲಿದೆ, ವೈದ್ಯಕೀಯ ಆಕ್ಸಿಜನ್ ಸರಬರಾಜು ಮಾಡಲು ಇರುವ ತೊಂದರೆ ಉಂಟಾಗಿರುವುದನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಆಕ್ಸಿಜನ್ ಹಂಚಿಕೆ ಆಧಾರದ ಮೇಲೆ ಈ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು
ಗಂಟಲು ದ್ರವ ತೆಗೆದ ಮೇಲೆ ವಿಳಂಬವಾಗದಂತೆ ತಪಾಸಣೆ ಕೈಗೊಂಡು 24 ಗಂಟೆಯಲ್ಲಿ ಫಲಿತಾಂಶ ವರದಿ ನೀಡಲು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ವಿಜಯಪುರ ನಗರದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಯ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ಸಂಬಂಧಿಸಿದ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಕ ಸಂಬಂಧ ಪಟ್ಟ ಅಭಿಯಂತರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲೆಯ ತಿಕೋಟಾ ಮತ್ತು ಬಬಲೇಶ್ವರ ಇವೆರಡು ಹೊಸ ತಾಲೂಕುಗಳು ರಚನೆಯಾಗಿದ್ದು ಇಲ್ಲಿ ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇವುಗಳಲ್ಲಿ ರೋಗಿಗಳ ಆರೈಕೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಮಾಡಲು ಹಾಗು ವಿಜಯಪುರ ತಾಲ್ಲೂಕಿನ ಕನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಅಥವಾ ಮೇಲ್ವಿಚಾರಕರನ್ನು ಕೋವಿಡ್-19 ಸಂಬಂಧಿತ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಈ ಕುರಿತು ಪ್ರತ್ಯೇಕವಾಗಿ ನಿಯೋಜನೆ ಆದೇಶವನ್ನು ಹೊರಡಿಸಲು ಹಾಗೂ ಸದರಿ ಯವರನ್ನು ಕೋವಿಡ್-19 ಮುಂಚೂಣಿ ಕಾರ್ಯಕರ್ತರು ಪರಿಗಣಿಸಲು ಸೂಚಿಸಿದರು.
ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಮಕ್ಕಳು ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ,ಸರ್ಕಾರವು ಇಂತಹ ಅನಾಥ ಮಕ್ಕಳ ಸಮಗ್ರ ರಕ್ಷಣೆಗೆ ಬದ್ಧವಾಗಿದೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡ ಮಕ್ಕಳ ಸಹಾಯವಾಣಿ 1098 ಕರೆ ಮಾಡಿದರೆ ಸರಕಾರದಿಂದ ಇಲಾಖೆಯ ಅಧಿಕಾರಿಗಳು ಸ್ಪಂದಿಸಿ ಮಗುವನ್ನು ರಕ್ಷಿಸಿ ಆರೈಕೆ ಮಾಡುವುದು ಕಾನೂನಿನಂತೆ ರಕ್ತಸಂಬಂಧಿಗಳು ಅಥವಾ ಹತ್ತಿರದ ಸಂಬಂಧಿಕರು ಇಲ್ಲದಿದ್ದಲ್ಲಿ ಕ್ರಮಬದ್ಧವಾಗದ ದತ್ತು ಪ್ರಕ್ರಿಯೆ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ತಜ್ಞ ವೈದ್ಯರ ಅಭಿಪ್ರಾಯದ ಪ್ರಕಾರ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಹಿನ್ನೆಲೆಯಲ್ಲಿ ತಲೆಯಲ್ಲಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವ ಸಂಭವವಿದ್ದು, .ಮಕ್ಕಳ ಆರೈಕೆ ಗೋಸ್ಕರ ಪ್ರತಿ ತಾಲ್ಲೂಕು ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಪೆಡಿಟ್ರೀಕ್ ಕೋವಿಡ್ ವಾರ್ಡ್ ಮೀಸಲಿರಿಸಲು ಆರೋಗ್ಯ ಇಲಾಖೆ ಸಚಿವರಿಗೆ ಕೋರಲಾಗಿದೆ. ಈ ಸಂಬಂಧ ಅವಶ್ಯಕ ಉಪಕರಣಗಳನ್ನು ಪೂರೈಸಲು ಮತ್ತು ಮಕ್ಕಳ ಆರೋಗ್ಯ ಇಲಾಖೆ ಸಚಿವರಿಗೆ ಕೋರಲಾಗಿದೆ. ಅಲ್ಪಪ್ರಮಾಣದ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಮಕ್ಕಳು ಆರೈಕೆಗಾಗಿ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಚೈಲ್ಡ್ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 4-5 ದಿನಗಳಿಂದ ಕೋವಿಡ್ 19 ಪ್ರಕರಣಗಳು ಹಾಗೂ ಮರಣ ಪ್ರಕರಣಗಳು ಕಡಿಮೆಯಾಗುತ್ತಿರುವುದನ್ನು ಗಮನಿಸಿ, ಅವಶ್ಯಕ ಕ್ರಮಗಳನ್ನು ಕೈಗೊಂಡಿದ್ದಕ್ಕೆ ಜಿಲ್ಲಾಡಳಿತವನ್ನು ಪ್ರಶಂಸಿಸಿ ಅಭಿನಂದಿಸುತ್ತ ಮುಂದಿನ ದಿನಗಳಲ್ಲಿ ಕೋವಿಡ್-19 ತಡೆಗಟ್ಟುವಲ್ಲಿ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಗೋವಿಂದ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.