ಗ್ರಾಮಗಳಲ್ಲಿ ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಅಗತ್ಯ

ಚಿತ್ರದುರ್ಗ. ಡಿ.೭; ಯುವಕರು ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಿ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಂಡು ಹಸಿರು ಗ್ರಾಮವನ್ನಾಗಿ ಮಾಡಬೇಕು, ಸ್ವಚ್ಚ ಹಾಗೂ ಆರೋಗ್ಯ ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪ್ರತಿಯೊಬ್ಬರು ಸ್ವಚ್ಛತೆಯನ್ನು ಕಾಪಾಡಿಕೊಂಡು ಸ್ವಾಸ್ಥ್ಯ ಸಮಾಜವನ್ನು ಮಾಡಲು ಕೈಜೋಡಿಸಬೇಕಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯೋಜನಾ ಅಧಿಕಾರಿ ಶ್ರೀ ಸುಹಾಸ್ ನುಡಿದರು. ಅವರು ನಗರದ ಸಮೀಪವಿರುವ ಅಯ್ಯನಹಳ್ಳಿ ಕುರುಬರಹಟ್ಟಿಯಲ್ಲಿ ನೆಹರು ಯುವ ಕೇಂದ್ರ ಚಿತ್ರದುರ್ಗ ಮತ್ತು ಆರೋಗ್ಯವೇ ಭಾಗ್ಯ ಯುವಕರ ಸಂಘ ಸಂಯುಕ್ತವಾಗಿ ಸ್ವಚ್ಚಗ್ರಾಮ ಹಸಿರುಗ್ರಾಮ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸಮುದಾಯ ಆರೋಗ್ಯ ಕೇಂದ್ರ ಮರಡಿಹಳ್ಳಿಯ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಬಿ. ಜಯಮ್ಮನವರು ಮಾತನಾಡುತ್ತಾ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ನಮ್ಮ ಕುಡಿಯುವ ನೀರು ಶುದ್ಧವಾಗಿರಬೇಕು, ಮನೆ ಪರಿಸರ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಇರುವಂತೆ ನೋಡಿಕೊಳ್ಳಲು ಅರಿವು ಮೂಡಿಸ ಬೇಕು. ನಮ್ಮ ಪರಿಸರ ಮಾಲಿನ್ಯವಾದರೆ ಡೇಂಗ್ಯೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಬರುತ್ತದೆ. ಮಕ್ಕಳು ಹಾಗೂ ಮನೆಮಂದಿಯ ಎಲ್ಲರು ಮಲಗುವಾಗ ಸೊಳ್ಳೆಗಳು ರಕ್ಷಣೆಗೆ ಸೊಳ್ಳೆಪರದೆ ಬಳಸಬೇಕು ಎಂದು ತಿಳಿಸಿದರು.ಎಸ್ಸೆಸ್ ಆಸ್ಪತ್ರೆ ದಾವಣಗೆರೆಯ ವೈದ್ಯರಾದ ಡಾ. ವಿ. ಎಸ್. ಶರತ್ ಬಾಬುರವರು ಮಾತನಾಡುತ್ತಾ ಮಾನವ ಸಂಕುಲಕ್ಕೆ ನೀರು ತುಂಬಾ ಅವಶ್ಯಕ. ಮನುಷ್ಯ ಆಹಾರವಿಲ್ಲದೆ ಎಷ್ಟು ಕಾಲ ಬೇಕಾದರೂ ಬದುಕಬಹುದು ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ ಆದ್ದರಿಂದ ಜಲಸಂಪನ್ಮೂಲ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ತಿಳಿಸಿದರು. ಎ. ಪಿ. ಎಂ. ಸಿ. ಸಹಾಯಕ ಕಾರ್ಯದರ್ಶಿ ಎ.ಜಿ. ಸುರೇಂದ್ರ ಬಾಬು ಮಾತನಾಡಿ ಯುವಕರು ಈ ದೇಶದ ಆಸ್ತಿ, ಗ್ರಾಮದ ಸ್ವಚ್ಛತೆಗೆ ಯುವಕರು ಎಲ್ಲರಲ್ಲೂ ಸ್ವಚ್ಛತೆಯ ಅರಿವು ಮೂಡಿಸಬೇಕು ಬಹಿರ್ದೆಸೆ ಮಾಡುವಂತವರಿಗೆ ಬುದ್ಧಿ ಮಾತು ಹೇಳಿ ಮನೆಯ ಶೌಚಾಲಯ ಉಪಯೋಗಿಸಲು ತಿಳಿಸಬೇಕು ಎಂದರು.ಈ ವೇಳೆ ಹಲವರಿದ್ದರು.