ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸದ ಅಧಿಕಾರಿಗಳ ನಡೆಗೆ ಧಿಕ್ಕಾರ

ಚಿತ್ತಾಪೂರ:ಜು.30:ತಾಲ್ಲೂಕಿನ ಇಂಗಳಗಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಸುಮಾರು ಸಾರಿ ಮನವಿ ಮಾಡಿದರೂ ಸಹ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅವರ ನಡೆಗೆ ಧಿಕ್ಕಾರ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸಾಯಬಣ್ಣಾ ಗುಡುಬಾ ಆಗ್ರಹಿಸಿದ್ದಾರೆ.

ಇಂಗಳಗಿ ಗ್ರಾಮದಿಂದ ಶಹಾಬಾದ್, ವಾಡಿ, ಕಲಬುರಗಿ ನಗರಕ್ಕೆ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಆದರೆ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ದುಬಾರಿ ಹಣ ನೀಡಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಬಸ್ ಸೌಕರ್ಯ ಇಲ್ಲದ ಪರಿಣಾಮ ಶಿಕ್ಷಣ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ.

ಬಸ್ ಸೌಕರ್ಯ ಇಲ್ಲದರಿಂದ ಗ್ರಾಮೀಣ ಮಕ್ಕಳ ಭವಿಷ್ಯ ಅತಂತ್ರವಾಗುತ್ತಿದೆ. ಇದರಿಂದ ಶಹಾಬಾದ್ ಮತ್ತು ಇಂಗಳಗಿ ಗ್ರಾಮದ ಮಧ್ಯೆ ಬಸ್ ಸಂಚಾರ ಆರಂಭಿಸಬೇಕು. ಗ್ರಾಮದಿಂದ ಬೆಳಿಗ್ಗೆ 6.20ಕ್ಕೆ ಬಸ್ ಬಿಡಬೇಕು. ನಂತರ ಶಹಾಬಾದ್ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಬಸ್ ಬಿಡಬೇಕು. ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿತ್ತಾಪುರ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಆದರೂ ಅಧಿಕಾರಿಗಳು ಬಸ್ ಆರಂಭಿಸಿಲ್ಲ.

ಇದರಿಂದ ವಿದ್ಯಾರ್ಥಿಗಳಿಗೆ ದಿನನಿತ್ಯದ ಸಂಚಾರ ತಂಬಾ ಕಷ್ಟಕರವಾಗಿದೆ. ಇದರಿಂದ ಕೂಡಲೇ ಬಸ್ ಆರಂಭಿಸಬೇಕು. ಇಲ್ಲದಿದ್ದರೆ ಚಿತ್ತಾಪುರ ಸಾರಿಗೆ ಇಲಾಖೆಯವರೆಗೆ ವಿದ್ಯಾರ್ಥಿಗಳಿಂದ ಪಾದಯಾತ್ರೆ ಆರಂಭಿಸಲಾಗುವುದು ಎಂದು ಗ್ರೇಡ್ 2 ತಹಸೀಲ್ದಾರ ಗುರುರಾಜ್ ಸಂಗಾವಿ ಮೂಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಿ ಮನವಿಯಲ್ಲಿ ಎಚ್ಚರಿಸಿದ್ದಾರೆ.