ಗ್ರಾಪಂ ಸದಸ್ಯರಿಗೆ ರಿಲಯನ್ಸ್ ಫೌಂಡೇಶನ್ ಕಾರ್ಯಗಾರ

ಔರಾದ :ಜು.21: ಸುಸ್ಥಿರ ಅಭಿವೃದ್ಧಿ ಗುರಿಗಳು ವಿಶ್ವಸಂಸ್ಥೆಯ 2030ರ ಕಾರ್ಯಸೂಚಿಯ ಭಾಗವಾಗಿದ್ದು, ಇವುಗಳನ್ನು ಸಾಧಿಸಲು ಸಮಗ್ರ ಸಾಕ್ಷ್ಯ ಆಧಾರಿತ ಚೌಕಟ್ಟಿನಲ್ಲಿ 17 ವಿವಿಧ ಗುರಿಗಳು, 169 ಉದ್ದೇಶಿತ ಧ್ಯೇಯಗಳು ಹಾಗೂ 232 ಸೂಚಕಗಳನ್ನು ಒದಗಿಸಲಾಗಿದೆ. ಆದುದರಿಂದ ಗ್ರಾಪಂ ಸದಸ್ಯರು ಗ್ರಾಮ ಮಟ್ಟದಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ತಾಪಂ ಇಒ ಬಿರೇಂದ್ರ ಸಿಂಗ್ ಠಾಕೂರ್ ತಿಳಿಸಿದರು.

ರಿಲಯನ್ಸ್ ಫೌಂಡೇಷನ್ ಬೀದರ್, ಸ್ಥಳೀಯ ತಾಲೂಕು ಪಂಚಾಯತ್ ವತಿಯಿಂದ ಗ್ರಾಪಂ ಸದಸ್ಯರಿಗೆ ಬುಧವಾರ ತಾಪಂ ಭವನದಲ್ಲಿ ಜರುಗಿದ ಹವಾಮಾನ ಸ್ಥಿತಿ ಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡತನ ನಿರ್ಮೂಲನೆ, ಮಾನವ ಅಭಿವೃದ್ಧಿ, ಲಿಂಗ ಮತ್ತು ಸಾಮಾಜಿಕ ಸಮಾನತೆ ಹಾಗೂ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಹಲವಾರು ನೀತಿಗಳು, ಸ್ಕೀಮುಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಸಮಗ್ರ ಮತ್ತು ಸುಸಂಬದ್ಧ ಮಾರ್ಗದಲ್ಲಿ ಹವಾಮಾನ ಕ್ರಮಗೊಳಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಅನುಸರಿಸಿ,ಅರಣ್ಯ ಪ್ರದೇಶದೊಳಗೆ ಮತ್ತು ಹೊರಗೆ ಪುನರ್‍ನಿರ್ಮಾಣ, ತ್ಯಾಜ್ಯ ನಿರ್ವಹಣೆ, ಸೌರ, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಉತ್ತೇಜನ ನೀಡಬೇಕಾಗಿದೆ ಎಂದರು.

ರಿಲಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ್ ಮಾತನಾಡಿ, ಹವಾಮಾನ ಸಂಬಂಧಿತ ವಿಪತ್ತುಗಳಿಂದ ಉಂಟಾಗುವ ಮಾನವ ಮತ್ತು ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಎಳು ಗುರಿಗಳನ್ನು ಹೊಂದಲಾಗಿದೆ. ಅದು ಹವಾಮಾನ ಮತ್ತು ಅಪಾಯಗಳನ್ನು ನಿರ್ವಹಿಸಲು ರಾಷ್ಟ್ರಗಳು ಮತ್ತು ಸಮೂದಾಯಗಳಿಗೆ ಗಣನೀಯವಾಗಿ ಸಹಾಯ ಮಾಡುತ್ತದೆ.

ಪ್ರಸ್ತುತ ಹವಾಮಾನ ಸ್ಥಿತಿಸ್ಥಾಪಕತ್ವ ದ ಪ್ರಯತ್ನಗಳು ಸಾಮಾಜಿಕ, ಆರ್ಥಿಕ, ತಾಂತ್ರಿಕ ಮತ್ತು ರಾಜಕೀಯ ಕಾರ್ಯತಂತ್ರಗಳನ್ನು ಸಮಾಜದ ಎಲ್ಲ ಮಾಪಕಗಳಲ್ಲಿ ಅಳವಡಿಸಲಾಗಿದೆ. ಇಂದಿನ ಯೂವ ಪಿಳಿಗೆಗೆ ಇದರ ಬಗ್ಗೆ ಗಂಭಿರವಾದ ಚಿಂತನೆ ಮಾಡುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಸುದೇಶ ಕೋಟೆ, ಹಣಮಂತರಾವ್ ಕೌಟಗೆ, ಪಪಂ ಮುಖ್ಯಾಧಿಕಾರಿ ಶಿವಕುಮಾರ್ ಘಾಟೆ ಹವಾಮಾನ ಸ್ಥಿತಿ ಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಹಲವಾರು ಸಂಗತಿಗಳನ್ನು ಗ್ರಾಪಂ ಸದಸ್ಯರ ಎದುರುಗಡೆ ಬಿಚ್ಚಿಟ್ಟರು.
ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ತಾಲೂಕಿನ ವಿವಿಧ ಗ್ರಾಪಂ ಗಳ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ಇದ್ದರು. ರಿಲಯನ್ಸ್ ಸಹಾಯಕ ಯೋಜನಾಧಿಕಾರಿ ಸಂಗಪ್ಪ ಅತಿವಾಳ, ಧೂಪತ್ಮಗಾಂವ್ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಜೊನ್ನೇಕೇರೆ, ಬಾದಲಗಾಂವ್ ಗ್ರಾಪಂ ಅಧ್ಯಕ್ಷೆ ಅನೀತಾ ಬಿರಾದರ್, ಮಲ್ಲಪ್ಪ ಗೌಡಾ, ಬಸವರಾಜ್ ಸ್ವಾಮಿ, ವಿಷ್ಣು ಕುಲಕರ್ಣಿ, ಇತರರಿದ್ದರು.