ಗ್ರಾಪಂ ತೆರಿಗೆ ವ್ಯಾಪ್ತಿಗಿಲ್ಲದ 36,107 ಕಟ್ಟಡ

ಕಲಬುರಗಿ,ಜು 28:ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 36,107 ಕಟ್ಟಡಗಳು ತೆರಿಗೆಗೆ ಒಳಪಡುವದಿಲ್ಲ.ಕಲಬುರಗಿಯಲ್ಲಿ 27,130 ವಸತಿಯೇತರ,2545 ವಾಣಿಜ್ಯ,12 ಕೈಗಾರಿಕೆ ಹಾಗೂ ಯಾದಗಿರಿಯಲ್ಲಿ 4129 ವಸತಿಯೇತರ,1892 ವಾಣಿಜ್ಯ,399 ಕೈಗಾರಿಕ ಕಟ್ಟಡಗಳಿವೆ ಎಂದು ಗ್ರಾಮೀಣಾಭಿವೃದ್ಧಿ ,ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ ಪಾಟೀಲ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ತೆರಿಗೆ ವ್ಯಾಪ್ತಿಗೆ ಒಳಪಡದ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಎಲ್ಲ ಭೂಮಿ,ಕಟ್ಟಡಗಳ ಸಮಗ್ರ ಸಮೀಕ್ಷೆ ನಡೆಸಿ ಆಸ್ತಿ ಮತ್ತು ತೆರಿಗೆ ನಮೂನೆಯಲ್ಲಿ ಆಸ್ತಿ ವಿವರಗಳನ್ನು ದಾಖಲಿಸಲಾಗುತ್ತಿದೆ.ಬಳಿಕ ತೆರಿಗೆ ಲೆಕ್ಕಾಚಾರ ಮಾಡಿ,ನಮೂನೆ 9-(ಎ) ವಹಿಯಲ್ಲಿ ನಮೂದಿಸಲು ತಿಳಿಸಲಾಗಿದೆ.ಪ್ರಸ್ತುತ ರಾಜ್ಯದ ಪ್ರತಿ ಗ್ರಾಪಂಗಳಲ್ಲಿ ಮ್ಯಾನ್ಯುವೆಲ್ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡದ ಎಲ್ಲ ಭೂಮಿ ಮತ್ತು ಕಟ್ಟಡಗಳಿಗೆ ಪಂಚತಂತ್ರ 2.0 ತಂತ್ರಾಂಶದ ಮೂಲಕ ತೆರಿಗೆ ವಿಧಿಸಿ,ವಸೂಲು ಮಾಡಲು ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.