ಗ್ರಾಪಂ ಚುನಾವಣೆ ಮಾದರಿ ಅಭ್ಯರ್ಥಿ ರಾವ್

ಮುಳಬಾಗಿಲು.ಡಿ೨೯;ಗ್ರಾಮಪಂಚಾಯಿತಿ ಚುನಾವಣೆ ಮತ್ಯಾವುದೇ ಚುನಾವಣೆಗಿಂತಲೂ ಅತಿ ಗಂಭೀರ ಹಾಗೂ ಅತಿ ಹೆಚ್ಚು ಭ್ರಷ್ಟವ್ಯವಸ್ಥೆಗೆ ಮುನ್ನುಡಿಯಾಗುತ್ತಲೇ ಸಾಗುತ್ತಿರುವುದನ್ನು ನಾವು ಕಾಣಬಹುದು. ಆದರೆ ಕಡಿಮೆ ವೆಚ್ಚದಲ್ಲಿ ಮತದಾರರಿಗೆ ಯಾವುದೇ ಹಣವಾಗಲೀ ಉಡುಗೊರೆಯಾಗಲೀ ನೀಡದೆ ಕೇವಲ ೧೭೦೦ ರೂ ವೆಚ್ಚದಲ್ಲೇ ಮತಯಾಚನೆ ಮಾಡಿರುವ ಅಭ್ಯರ್ಥಿಯನ್ನು ಮುಳಬಾಗಿಲು ತಾಲೂಕಿನಲ್ಲಿ ಕಾಣಬಹುದಾಗಿದೆ.
ದೇವರಾಯಸಮುದ್ರ ಗ್ರಾ.ಪಂ ವ್ಯಾಪ್ತಿಯ ಹೊಸಕೆರೆ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ದೊಡ್ಡಹೊನ್ನಶೆಟ್ಟಿಹಳ್ಳಿಯ ಗ್ರಾಮ ವಿಕಾಸ ಸಂಸ್ಥೆಯ ನಿರ್ದೇಶಕ ಎಂ.ವಿ.ಎನ್.ರಾವ್ ಸ್ಪರ್ಧೆ ಮಾಡಿ ನಾಮಪತ್ರ ಸಲ್ಲಿಕೆ ಸೇರಿದಂತೆ ಚುನಾವಣೆ ಕರಪತ್ರಗಳ ವರೆಗೂ ಕೇವಲ ೭೦೦ ರೂ ಖರ್ಚು ಮಾಡಿದ್ದು ಮತದಾನದ ದಿನ ಮಾತ್ರ ಎಲೆ ಅಡಿಕೆ ಮತ್ತಿತರ ಸಣ್ಣ ಪುಟ್ಟ ಖರ್ಚುಗಳಿಗೆ ೧ಸಾವಿರ ರೂ ಖರ್ಚು ಮಾಡಬೇಕಾಗಿ ಬಂದಿರುವುದು ಬೇಸರದ ಸಂಗತಿ ಎಂಬ ನೋವನ್ನು ಹಂಚಿಕೊಂಡಿದ್ದಾರೆ.
ರಾಮನಾಥಪುರ, ದೊಡ್ಡಹೊನ್ನಶೆಟ್ಟಿಹಳ್ಳಿ ಮೂರು ಗ್ರಾಮಗಳಲ್ಲಿ ೫೮೯ ಮತದಾರರಿದ್ದು ೫೪೨ ಮತದಾನವಾಗಿದ್ದು ಇದರಲ್ಲಿ ಎಂ.ವಿ.ಎನ್. ರಾವ್ ರವರ ಗೆಲುವು ಸಾಧ್ಯವಾದರೆ ಹಣವಿಲ್ಲದಿದ್ದರೂ ಚುನಾವಣೆಯನ್ನು ಗೆಲ್ಲಬಹುದೆಂಬುದು ಸಾಬೀತಾಗುತ್ತದೆ.
ಇವರ ವಿರುದ್ಧವಾಗಿ ಡಿ.ವಿ.ವೆಂಕಟೇಶಪ್ಪ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದಾರೆ. ಎಸ್ಸಿ ಮಹಿಳಾ ಕ್ಷೇತ್ರಕ್ಕೆ ಹೆಚ್.ಎನ್.ನೇತ್ರಾವತಿ, ಎನ್.ಪದ್ಮಾವತಮ್ಮ, ಸಿ.ಪ್ರಮೀಳ ಕಣದಲ್ಲಿದ್ದಾರೆ. ರಾವ್ ಒಬ್ಬಂಟಿಯಾಗಿ ಸ್ಪರ್ಧೆ ಮಾಡಿ ೧೯೮೦ ರಿಂದ ಈ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಗ್ರಾಮವಿಕಾಸ ಸಂಸ್ಥೆಯ ಮೂಲಕ ದೀನದಲಿತರ, ಬಡವರ್ಗದವರ ಮಹಿಳೆಯರ ಪರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದು ಈಗ ಅವರ ಕೈ ಹಿಡಿಯುತ್ತದೆಯೋ ಎಂಬುದು ನೋಡಬೇಕಾಗಿದೆ.
ಪ್ರತಿಕ್ರಿಯೆ:
ಚುನಾವಣೆಗೆ ಸ್ಪರ್ಧೆ ಮಾಡಿದ್ದು ಹೊಸಕೆರೆ, ರಾಮನಾಥಪುರ, ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರಿಗೆ ಕರಪತ್ರ ನೀಡಿ ಮತಯಾಚನೆ ಮಾಡಿದ್ದೇನೆ, ಮದ್ಯ, ಹಣ, ಉಡುಗೊರೆ ನೀಡುವುದಿಲ್ಲ, ಕರ ಪತ್ರ ನೀಡುತ್ತಿದ್ದೆನೆ ಎಂದು ತಿಳಿಸಿದ್ದು ಉತ್ತಮವಾದ ವಾತಾವರಣ ಕಂಡುಬಂದಿದೆ. ಡಿ೩೦ರ ಮತ ಎಣಿಕೆಯಂದು ಜನರು ತೀರ್ಪು ಯಾವರೀತಿ ಪ್ರಕಟಗೊಳ್ಳುತ್ತದೋ ಅದನ್ನು ಸ್ವೀಕರಿಸುತ್ತೇನೆ.

  • ಎಂ.ವಿ.ಎನ್.ರಾವ್. ಗ್ರಾಮವಿಕಾಸ ಸಂಸ್ಥೆ ನಿರ್ದೇಶಕ ಹೊನ್ನಶೆಟ್ಟಿಹಳ್ಳಿ.