ಗ್ರಾಪಂ ಚುನಾವಣೆ: ಮತಗಟ್ಟೆ ಅಧಿಕಾರಿಗಳ ನೇಮಕ

ಬೀದರ ಡಿ. 21: ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್, ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಗ್ರಾಮ ಪಂಚಾಯತ ಚುನಾವಣಾ ವೀಕ್ಷಕರು ಮತ್ತು ಎನ್.ಐ.ಸಿ, ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಎನ್‍ಐಸಿ ವಿಭಾಗದಲ್ಲಿ ಡಿಸೆಂಬರ್ 20ರಂದು ಅಂತಿಮ ಹಂತದ ರ್ಯಾಂಡಾಮಿಜೇಶನ್ ಮೂಲಕ ಮತಗಟ್ಟೆ ಅಧಿಕಾರಿಗಳ ನೇಮಕ ಮಾಡಲಾಯಿತು.
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020ರ ಪ್ರಯುಕ್ತ ದಿನಾಂಕ 22-12-2020 ರಂದು ಮೊದಲನೇ ಹಂತದ ಮತದಾನವು ಬಸವಕಲ್ಯಾಣ, ಹುಲಸೂರು, ಹುಮನಾಬಾದ, ಚಿಟಗುಪ್ಪಾ ಹಾಗು ಭಾಲ್ಕಿ ತಾಲ್ಲೂಕುಗಳಲ್ಲಿ ನಡೆಯಲಿದೆ.
ಡಿಸೆಂಬರ್ 21ರಂದು ಬಸವಕಲ್ಯಾಣ, ಹುಲಸೂರು (ಬಸವವೇಶ್ವರ ಪ್ರೌಢಶಾಲೆ ಥೇರ್ ಮೈದಾನ ಬಸವಕಲ್ಯಾಣ) ಹುಮನಾಬಾದ, ಚಿಟಗುಪ್ಪಾ (ರಾಮ್ ಮತ್ತು ರಾಜ್ ಪಿ.ಯು. ಕಾಲೇಜ್ ರಾಷ್ಟ್ರೀಯ ಹೆದ್ದಾರಿ ನಂ-65 ಹುಮನಾಬಾದ) ಹಾಗು ಭಾಲ್ಕಿ (ಸರಕಾರಿ ಪ್ರೌಢಶಾಲೆ ಬಸವೇಶ್ವರ ಚೌಕ್ ಹತ್ತಿರ ಭಾಲ್ಕಿ) ತಾಲ್ಲೂಕುಗಳ ನಿಗದಿತ ಕೇಂದ್ರ ಸ್ಥಳಗಳಲ್ಲಿ ಮಸ್ಟರಿಂಗ ಹಾಗೂ ಡಿ-ಮಸ್ಟರಿಂಗ್ ಕಾರ್ಯ ಕೈಗೊಳ್ಳಾಗುವುದು ಹಾಗೂ ಮತಗಟ್ಟೆ ಅಧಿಕಾರಿಗಳು ಸದರಿ ದಿನಾಂಕದಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಹಾಜರಾಗಿ ತಮಗೆ ವಹಿಸಿದ ಕರ್ತವ್ಯವನ್ನು ನಿರ್ವಹಿಸಲು ಸೂಚಿಸಲಾಗಿದೆ.
ಡಿಸೆಂಬರ್ 22-12-2020 ರಂದು ಜರುಗುವ ಮೊದಲನೇ ಹಂತದ ಮತದಾನದ ದಿನದಂದು ಕಾರ್ಯ ನಿರ್ವಹಿಸಲು ಒಟ್ಟು 3284 (ಶೇ.10 ಸೇರಿದಂತೆ) ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, 950 ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ ಹಾಗೂ ಬೀದರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆಯು ಇ.ವ್ಹಿ.ಎಮ್. ಮತಯಂತ್ರಗಳ ಮೂಲಕ ಮತದಾನ ನಡೆಯಲಿದ್ದು, ಸದರಿ ಕಾರ್ಯದಲ್ಲಿ (ಶೇ.10 ಸೇರಿದಂತೆ) ಒಟ್ಟು 819 ಮತಯಂತ್ರಗಳನ್ನು ಉಪಯೋಗಿಸಲಾಗುವುದು.
ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಯು ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ಜರುಗಲು ಮುಂಜಾಗ್ರತವಾಗಿ 48 ಗಂಟೆಗಳ ಮುಂಚಿತವಾಗಿ ಚುನಾವಣೆ ಪ್ರಚಾರ ಪ್ರಕ್ರಿಯೆ ಮುಕ್ತಾಯಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.