ಗ್ರಾಪಂ ಚುನಾವಣೆ – ಗುಳೆ ಹೋದವರಿಗೆ ಗಾಳ

ಹೊಸಪೇಟೆ ಡಿ 21 : ಗ್ರಾಮ ಪಂಚಾಯತಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಮತದಾರರ ಮನವೋಲೈಸಲು ನಾನಾ ಕಸರತ್ತುಗಳನ್ನು ತೋರಿಸುತ್ತಿದ್ದಾರೆ. ಅದೆ ರೀತಿ ಊರು ಬಿಟ್ಟು ಜೀವನಕ್ಕಾಗಿ ಹೊರಟವರ ಮೇಲೂ ಹೆಚ್ಚು ಪ್ರಿಯವಾಗಿದ್ದಾರೆ.
ಕೋವಿಡ್19 ಸಾಂಕ್ರಾಮಿಕ ರೋಗ ಬಾಧೆಯಿಂದ ತತ್ತರಿಸಿದ ಬಹುತೇಕರು ಕಳೆದ ಎರಡು ತಿಂಗಳಿನಿಂದ ಕೊಂಚ ಸಕ್ರಿಯರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ, ಅದರಲ್ಲೂ ಪರ ಊರಲ್ಲಿ ದುಡಿಯುತ್ತಿದ್ದ ಹಳ್ಳಿ ಜನರು ಲಾಕ್ ಡೌನ್ ಸಮಯದಲ್ಲಿ ಊರು ತೊರೆದು ಪುನಃ ಹಳ್ಳಿಗೆ ಸೇರಿದವರು ನಗರದತ್ತ ಮುಖಮಾಡಿದ್ದು, ಸದ್ಯ ಗ್ರಾಮ ಪಂಚಾಯತಿಯ ಹಿನ್ನಲೆಯಲ್ಲಿ ಮತ್ತೆ ಅವರನ್ನು ಕರೆತರುವ ಕಸರತ್ತು ನಡೆದಿದೆ.
ಕಬ್ಬು, ಕಾಫಿ ತೋಟಕ್ಕೆ ಗುಳೆ: ಲಾಕ್ ಡೌನ್ ಪರಿಣಾಮವಾಗಿ ತತ್ತರಿಸಿದ್ದ ಬಹುತೇಕ ಗ್ರಾಮಸ್ಥರು ಸದ್ಯ ಊರುಗಳಿಗೆ ಗುಳೆ ಹೋಗಿದ್ದು, ಅದರಲ್ಲೂ ಬಹುತೇಕ ತಾಂಡ ವಾಸಿಗಳು ಕಬ್ಬು ಕಡಿಯುವ ಹಾಗೂ ಕಾಫಿ ತೋಟಗಳಿಗೆ ಹೋಗಿದ್ದಾರೆ. ಅವರನ್ನು ಚುನಾವಣೆ ಹಿನ್ನಲೆಯಲ್ಲಿ ವಾಪಸ್ಸು ಕರೆತರುವ ಕಾರ್ಯದಲ್ಲಿ ಅಭ್ಯರ್ತಿಗಳು ನಿರತರಾಗಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು ನಾಳೆ ನಡೆಯುವ ಚುನಾವಣೆಗೆ ಕಬ್ಬು ಕಡೆಯಲು ತೆರಳಿದ ಹೊಸಪೇಟೆ ಸಂಡೂರು ಭಾಗದ ತಾಂಡ ಜನರನ್ನು ಕರೆತರಲು ಮುಂದಾಗಿದೆ.ಇನ್ನೂ ಹರಪನಹಳ್ಳಿ ಮತ್ತು ಹಡಗಲಿ ಭಾಗದ ಜನರು ಕಾಫಿ ತೋಟಗಳಿಗೆ ಗುಳೆ ಹೊರಟಿರುವ ಮತದಾರರನ್ನು ಈಗಾಗಲೇ ಸಂಪರ್ಕಿಸಿದ್ದು, ಚುನಾವಣೆ ಮುನ್ನಾ ದಿನದಂದು ಅವರನ್ನು ಕರೆತಂದು ಮತದಾನ ಮಾಡಲು ಸಿದ್ಧತೆಯನ್ನು ಬಹುತೇಕ ಅಭ್ಯರ್ಥಿಗಳು ನಡೆಸಿದ್ದಾರೆ.
ಇನ್ನೂ ಬೆಂಗಳೂರು ಸೆರಿದಂತೆ ಹಲವು ನಗರಕ್ಕೆ ಕೆಲಸಕ್ಕೆ ಹೋಗಿರುವ ಯುವಕರನ್ನು ಕರೆತರುತ್ತಿದ್ದಾರೆ ಅಭ್ಯರ್ಥಿಗಳು.
ಪ್ರಜಾಪ್ರಭುತ್ವದ ಬಲಿಷ್ಠತೆಗೆ ಸಾಂವಿಧಾನಿಕವಾಗಿ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕನ್ನು, ಕರ್ತವ್ಯವನ್ನು ಅರಿಯದೇ ಬದುಕನ್ನು ಕಟ್ಟಿಕೊಳ್ಳುವ ಬರದಲ್ಲಿ ಗುಳೆ ಹೊರಟ ಜನರನ್ನು ಕರೆತರಲು ಹಾಗೂ ಮತದಾನದ ಮಹತ್ವವನ್ನು ಸಾರುವಲ್ಲಿ ಸರ್ಕಾರ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಗ್ರಾಮಪಂಚಾಯತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಕಾಣುತಿರುವ ಕೆಲ ಅರ್ಭರ್ಥಿಗಳು ಮುತುವರ್ಜಿಯಿಂದ ಗುಳೆ ಹೋದ ಜನರನ್ನು ಮತದಾನಕ್ಕೆ ಕರೆತರುತ್ತಿರುವುದು ಒಂದು ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯೇ ಸರಿ ಆದರೆ ಈ ಸಮಯವನ್ನೇ ನೆಪವಾಗಿಸಿ ಆಮೀಷ ತೋರಿಸಬಹುದಾಗಿದ್ದು, ಅದರ ಬದಲು ಗುಳೇ ಹೊರಟಿರುವ ಜನರೇ ಮತದಾನದ ಮಹತ್ವವನ್ನು ಅರಿತು ಸ್ವಯಃಪ್ರೇರಿತವಾಗಿ ಗ್ರಾಮಕ್ಕೆ ಬಂದು ಮತದಾನ ಮಾಡಬೇಕಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.