ಗ್ರಾಪಂ ಚುನಾವಣೆ-ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಡಿಸಿ ಸೂಚನೆ

ಮುಳಬಾಗಿಲು ಡಿ೨೨-ಗ್ರಾಮಪಂಚಾಯಿತಿ ಚುನಾವಣೆ, ಮತದಾನ ವ್ಯವಸ್ಥೆಯನ್ನು ಸುಸೂತ್ರವಾಗಿ ತಾಲೂಕು ಆಡಳಿತ ಮತ್ತು ಚುನಾವಣೆ ಶಾಖೆಯಿಂದ ಮಾಡಲಾಗುತ್ತದೆ ೩೦ ಗ್ರಾ.ಪಂ ವ್ಯಾಪ್ತಿಯ ೩೦೦ ಮತಗಟ್ಟೆಗಳಲ್ಲಿ ಮತದಾನದ ವ್ಯವಸ್ಥೆ ಅಚ್ಚುಕಟ್ಟಾಗಿ ಯಾವುದೇ ಲೋಪವಾಗದಂತೆ ಬ್ಯಾಲೆಟ್ ಮತಪತ್ರ ಮೂಲಕ ಮತದಾನಕ್ಕೆ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು, ೩೦ ಆರ್.ಒ ಮತ್ತು ೩೦ಎ.ಆರ್.ಒಗಳೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕೆಂದು ಡಿ.ಸಿ. ಸಿ.ಸತ್ಯಭಾಮ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೧ ಕೊಠಡಿಗಳಲ್ಲಿ ೭೫೦ ಚುನಾವಣೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ ಚುನಾವಣೆ ಆಯೋಗದ ನಿರ್ದೇಶನಗಳು ಕಡ್ಡಾಯವಾಗಿ ಪಾಲಿಸಬೇಕು, ಇದಕ್ಕಾಗಿ ೧೧ ಮಾಸ್ಟರ್ ಟ್ರೈನಿಗಳಿಂದ ತರಬೇತಿಯನ್ನು ನೀಡಲಾಗುತ್ತಿದೆ, ಈಗಾಗಲೇ ಹಲವಾರು ಚುನಾವಣೆಗಳನ್ನು ನಡೆಸಿರುವ ನೀವು ಈ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.
ಉಪನ್ಯಾಸಕರು, ಶಿಕ್ಷಕರು ಸೇರಿದಂತೆ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಯೊಂದಿಗೆ ಡಿ.ಸಿ. ರವರು ಪ್ರತಿ ಕೊಠಡಿಗೂ ಬೇಟಿ ನೀಡಿ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿದರಲ್ಲದೆ ಅದಕ್ಕೆ ಪರಿಹಾರಗಳನ್ನು ಸೂಚಿಸಿದರು. ಕೆಲವು ಶಿಕ್ಷಕರು ಚುನಾವಣೆ ಭಾನುವಾರ ಬಂದಿರುವುದರಿಂದ ಸೋಮವಾರ ರಜೆ ನೀಡಬೇಕೆಂಬ ಬೇಡಿಕೆಗೆ ಡಿಸಿ ರವರು ಸರ್ಕಾರಿ ಉದ್ಯೋಗ ಸಿಗುವುದೇ ಅದೃಷ್ಟ ಉದ್ಯೋಗವೆಂಬುದು ದಿನದ ೨೪ ಗಂಟೆ ಸೇವೆ ಸಲ್ಲಿಸುವುದು ಹಲವಾರು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯವಾಗಿದೆ, ನೀವು ಒಂದು ದಿನಕ್ಕೆ ಈ ರೀತಿ ಆಲೋಚನೆ ಮಾಡಬಾರದೆಂದು ಕಿವಿ ಮಾತು ಹೇಳಿದರು.
ಮಹಿಳಾ ಶಿಕ್ಷಕಿಯರು ಸಾರ್ವಜನಿಕ ಶೌಚಾಲಯ ಸ್ವಚ್ಚತೆ ಇಲ್ಲದಿರುವ ಬಗ್ಗೆ ತೊಂದರೆಯಾಗುತ್ತಿದೆ, ಮದ್ಯಾಹ್ನದ ಊಟದ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಡಿ.ಸಿ. ರವರ ಗಮನಕ್ಕೆ ತಂದಾಗ ಬಳಸಿದ ಶೌಚಾಲಯಕ್ಕೆ ನೀರು ಹಾಕುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು, ಆದರೂ ನಗರಸಭೆಯಿಂದ ಶೌಚಾಲಯ ಸ್ವಚ್ಚತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಸಾಮಾಜಿಕ ಅಂತರ ಮತ್ತು ಮಾಸ್ಕ್‌ನ್ನು ಬಳಸಿಕೊಂಡು ಕೊರೋನ ನಿಯಮಗಳನ್ನು ಪಾಲಿಸಿಕೊಂಡು ತಾಲೂಕು ಆಡಳಿತದಿಂದ ಮಾಡಿರುವ ಉಪಹಾರವನ್ನು ನೂಕು ನುಗ್ಗಲು ಇಲ್ಲದಂತೆ ನಿಮ್ಮಲ್ಲೇ ಮಾಡಿಕೊಳ್ಳಬೇಕೆಂದು ಡಿ.ಸಿ. ಸಲಹೆ ನೀಡಿದರು.
ಜಿಲ್ಲಾ ಚುನಾವಣೆ ಶಾಖೆ ತಹಶೀಲ್ದಾರ್ ಬಿ.ಎನ್.ನಾಗವೇಣಿ, ತಹಶೀಲ್ದಾರ್ ಕೆ.ಎನ್.ರಾಜಶೇಖರ್, ಚುನಾವಣೆ ಶಾಖೆ ಉಪತಹಶೀಲ್ದಾರ್ ಕೆ.ಆರ್.ಮಂಜುನಾಥ್, ಕ್ರಾಂತಿವರ್ಮ, ಸಿ.ಚೆಲುವಸ್ವಾಮಿ, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ಟಿ.ಹೆಚ್.ಒ ಡಾ.ಕೆ.ಎಂ.ವರ್ಣಶ್ರೀ, ಚುನಾವಣೆ ಮಾಸ್ಟರ್ ಟ್ರೈನಿ ಆಲಂಗೂರು ಮಂಜುನಾಥ್, ಮೋಹನ್‌ರೆಡ್ಡಿ, ಕೆ.ಜಗನ್ನಾಥ್ ಇದ್ದರು.