ಗ್ರಾಪಂ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಸದುಪಯೋಗವಾಗಲಿ : ಕೊತ್ವಾಲ್

ಅಥಣಿ : ನ.20:ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರು ಯಾರೂ ಗುಳೆ ಹೋಗದಂತೆ ತಡೆಯುವುದು ಹಾಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಈ ಉದ್ಯೋಗ ಖಾತ್ರಿ ಯೋಜನೆ ರೂಪಿಸಿದ್ದು, ಅಂತಹ ಕಾರ್ಮಿಕರ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತು ಗ್ರಾಪಂ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಾಪಂ ಸಹಾಯಕ ನಿರ್ದೇಶಕ ಮೈಹಿಬೂಬ ಕೊತ್ವಾಲ್ ಹೇಳಿದರು.
ತಾಲೂಕಿನ ತೆಲಸಂಗ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ನಡೆದ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ದೊರೆಯುತ್ತಿದೆ. ಇದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಬಹು ಮುಖ್ಯವಾಗಿದೆ ಎಂದರು.
ತಾಲೂಕಾ ಆಯ್.ಇ.ಸಿ ಸಂಯೋಜಕ ಶಿವಾನಂದ ಸಾವಗಾಂವ, ತಾಪಂ ತಾಂತ್ರಿಕ ಸಂಯೋಜಕ ದುಂಡಪ್ಪ ಬಡಿಗೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ, ಉಪ ತಹಸೀಲ್ದಾರ ಎಮ್.ಎಸ್.ಯತ್ನಟ್ಟಿ, ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ಪಿಡಿಒ ಬೀರಪ್ಪ ಕಡಗಂಚಿ ಗ್ರಾಪಂ ಸದಸ್ಯರು, ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ರೈತರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.