ಗ್ರಾಪಂ ಎಲೆಕ್ಷನ್ ರಿಸಲ್ಟ್ ಗೆ ಕೌಂಟ್‍ಡೌನ್: ಅಭ್ಯರ್ಥಿಗಳಲ್ಲಿ ಟೆನ್ಷನ್

ಸಂತೋಷ್ ಸಂಶಿ, ಕಂಪ್ಲಿ

ಹಳದಿ ಎಲೆ ಉದುರಿತೋ… ಹಸಿರೆಲೆ ಚಿಗುರಿತೋ…
• ನವೋಲ್ಲಾಸ., ನವೋತ್ಸಾಹ ತುಂಬುವ ಹೊಸ್ತಿಲ ಹುಣ್ಣಿಮೆ
• ಡಿ.30ರ ಹೊಸ್ತಿಲ ಹುಣ್ಣಿಮೆ ದಿನದಂದೇ ಗ್ರಾಪಂ ಚುನಾವಣಾ ಫಲಿತಾಂಶ
• ಹುಣ್ಣಿಮೆ ಎಫೆಕ್ಟ್.., ಗ್ರಾಪಂ ಅಭ್ಯರ್ಥಿಗಳ ಪೈಕಿ ಅದ್ಯಾರಿಗೆಲ್ಲ ಗೆಲುವು..ಸೋಲು..
• ತಾಲೂಕಿನ ಹಳ್ಳಿ-ಹಳ್ಳಿಗಳಲ್ಲೂ ಗರಿಗೆದರಿದೆ ಹುಣ್ಣಿಮೆ ದಿನದ ರಿಸಲ್ಟ್” ಚರ್ಚೆ

ಕಂಪ್ಲಿ ಡಿ 29 : “ಅಲ್ಲೋ ತಮ್ಮ… ನಾಳೆ ಹುಣಿವೀ ಐತೆ.. ಹುಣಿವೀ ದಿನಾನೇ ಗ್ರಾಮ್ ಪಂಚಾಯ್ತಿ ರಿಸಲ್ಟೂ ಐತೆ.. ಅದ್ಯಾರಿಗೆ ಅದೃಷ್ಟ ಕಾದೈತೋ… ಅದ್ಯಾರಿಗೆಲ್ಲ ಗ್ರಹಚಾರ ವಕ್ಕರಿಸ್ತೈತೋ..”
ಹೌದು… ಕಂಪ್ಲಿ ತಾಲೂಕಿನ 10 ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸದ್ಯ ಹೀಗನ್ನೋ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಡಿ.30ರ ಬುಧವಾರದಂದು ಗ್ರಾಪಂ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಚುನಾವಣೆ ಸಮರದಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ನಾನಾ ಕಸರತ್ತುಗಳನ್ನು ನಡೆಸಿದ ಅಭ್ಯರ್ಥಿಗಳಿಗೆ ಡಿ.30ರ ಬುಧವಾರ ಅಕ್ಷರಶಃ ಅಗ್ನಿಪರೀಕ್ಷೆಯ ದಿನವೆಂದೇ ಬಿಂಬಿತಗೊಂಡಿದೆ. ಈಗಾಗಲೇ ಚುನಾವಣಾ ಫಲಿತಾಂಶದ ಬಗ್ಗೆ ಅಭ್ಯರ್ಥಿಗಳು ತರಹೇವಾರಿ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರೆ. ಅದೊಮ್ಮೆ ಗೆಲುವು ನಮ್ಮದಾದರೆ ಮುಂದೇನು ಮಾಡಬೇಕು. ಅದೊಮ್ಮೆ ಸೋತರೆ ಆ ನೋವನ್ನು ಅರಗಿಸಿಕೊಳ್ಳುವುದು ಹೇಗೆ..? ಹೀಗನ್ನೋ ನಾನಾ ಬಗೆಯ ಚಿಂತೆಯಲ್ಲಿಯೇ ಅಭ್ಯರ್ಥಿಗಳು ಮುಳುಗಿಬಿಟ್ಟಿದ್ದಾರೆ. ಹೀಗೆ ಆಸೆ, ಅಭಿಲಾಷೆ, ಆತಂಕಗಳಲ್ಲಿ ಮಗ್ನರಾಗಿರುವ ಅಭ್ಯರ್ಥಿಗಳಿಗೀಗ ಹುಣ್ಣಿಮೆ ಭೀತಿ ಶುರುವಾದಂತಾಗಿದೆ. ಇದಕ್ಕೆ ಕಾರಣ ಮಾತ್ರ ತಾಲೂಕಿನ ವಿವಿಧ ಹಳ್ಳಿಗಳ ಸಾರ್ವಜನಿಕ ವಲಯದಲ್ಲಿ ತೆರೆಮರೆಯಲ್ಲಿ ನಡೀತಿರೋ ಹೊಸ್ತಿಲ ಹುಣ್ಣಿಮೆ ಬಗೆಗಿನ ಚರ್ಚೆ ಅನ್ನೋದೆ ಸದ್ಯದ ಕುತೂಹಲಕಾರಿ ಸಂಗತಿ.
ಹೌದು.. ಡಿ.30ರ ಬುಧವಾರ ಗ್ರಾಪಂ ಚುನಾವಣಾ ಫಲಿತಾಂಶದ ದಿನದಂದೇ ಹೊಸ್ತಿಲ ಹುಣ್ಣಿಮೆಯೂ ಬಂದಿದೆ. ಅಸಲಿಗೆ ಈ ಹೊಸ್ತಿಲ ಹುಣ್ಣಿಮೆ ಬಗ್ಗೆ ಅದರದ್ದೇ ವಿಶೇಷವಾದ ವ್ಯಾಖ್ಯಾನವಿದೆ. ಅದರಲ್ಲೂ ಪಟ್ಟಣ, ನಗರ ಪ್ರದೇಶಗಳಿಗಿಂತ ಹಳ್ಳಿ ಭಾಗಗಳಲ್ಲಂತು ಅಮವಾಸ್ಯೆ, ಹುಣ್ಣಿಮೆ ಬಗೆಗಿನ ತರಹೇವಾರಿ ನಂಬಿಕೆ, ಮೂಢನಂಬಿಕೆ, ಭಕ್ತಿ, ಭೀತಿ ಎಲ್ಲವೂ ಜಾಸ್ತಿಯೇ ಎನ್ನಬಹುದು. ಇದೀಗ ಹುಣ್ಣಿಮೆ ದಿನವೇ ಗ್ರಾಪಂ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳ ಅದೃಷ್ಟ, ಗ್ರಹಚಾರಗಳ ಲೆಕ್ಕಾಚಾರದ ವಿಷ್ಯದ ಚರ್ಚೆ ಜೋರಾಗಿಬಿಟ್ಟಿದೆ.

ಹೊಸ್ತಿಲ ಹುಣ್ಣಿಮೆ ಅಂದ್ರೆ ನವೋಲ್ಲಾಸ., ನವೋತ್ಸಾಹದ ಸಂಕೇತ:
ಹೌದು… ಹಿಂದೂ ಪಂಚಾಂಗದ ಪ್ರಕಾರ., ಹೊಸ್ತಿಲ ಹುಣ್ಣಿಮೆ ಅಂದರೆ, ಒಣಗಿರುವ, ಬಾಡಿ ಹೋಗಿರುವ ಗಿಡ ಮರಗಳಲ್ಲು ಕೂಡ ಹಸಿರಾದ ಚಿಗುರು ಒಡಮೂಡಿ ಬರುವಂತಹ ಶುಭಸೂಚಕ ಹುಣ್ಣಿಮೆಯಂತೆ. ಹುಣ್ಣಿಮೆಯ ಈ ವ್ಯಾಖ್ಯಾನವನ್ನು ಇದೀಗ ಹಳ್ಳಿ ಮತದಾರರು ಅಭ್ಯರ್ಥಿಗಳಿಗೆ ಹೋಲಿಕೆ ಮಾಡಿ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಿರುವುದು ವಿಶೇಷವೆನಿಸಿಕೊಂಡಿದೆ.
ಹಳ್ಳಿಗರ ಪ್ರಕಾರ, ಕಳೆದ ಬಾರಿ ಗ್ರಾಪಂ ಚುನಾವಣೆ ಸೋತು ಸುಣ್ಣವಾದ ಕೆಲ ಅಭ್ಯರ್ಥಿಗಳು ಅನುಕಂಪವನ್ನೇ ಬಂಡವಾಳವನ್ನಾಗಿಸಿಕೊಂಡು ಸುಲಭವಾಗಿ ಗೆಲುವು ಗಿಟ್ಟಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇನ್ನು ಹಿಂದೆಂದೂ ಸ್ಪರ್ಧಿಸದ ಹಾಗೂ ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ ಕೆಲ ಅಭ್ಯರ್ಥಿಗಳು ಹಳ್ಳಿ ಮತದಾರ ತಮಗೆ ಆಶೀರ್ವದಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದಾರೆ. ಆದರೆ, ಸದ್ಯ ತಾಲೂಕಿನ ಕೆಲ ಹಳ್ಳಿ ಭಾಗಗಳಲ್ಲಿನ ಜನರು ಹೊಸ್ತಿಲ ಹುಣ್ಣಿಮೆಯ ಎಫೆಕ್ಟ್ ನಿಂದ ಕಳೆದ ಬಾರಿ ಸೋತು ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಸದ್ದು ಸಪ್ಪಳವಿಲ್ಲದೇ ಸೋತು ಅಖಾಡದಿಂದ ಕಣ್ಮರೆಯಾಗಬಹುದು. ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಸಿರೆಲೆಗಳಂತೆ ಚಿಗುರಿ ಗ್ರಾಪಂ ಅಖಾಡದಲ್ಲಿ ಮಿಂಚಬಹುದು ಎನ್ನುವ ಲೆಕ್ಕಾಚಾರದ ಹಸಿಬಿಸಿ ಚರ್ಚೆಗಳನ್ನು ನಡೆಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ಗೆಲುವು ಕೊಡುತ್ತಾ ಹಳೇ ಅಭ್ಯರ್ಥಿಗಳ ಅನುಕಂಪದ ಅಸ್ತ್ರ..?
ಹಳೇ ಅಭ್ಯರ್ಥಿಗಳನ್ನೂ ಬದಿಗೊತ್ತಿ ಹೊಸಬರೇ ಮಿಂಚಿ ಬಿಡ್ತಾರಾ..? :
ಸದ್ಯ ವಿವಿಧ ಹಳ್ಳಿಗಳ ಸಾರ್ವಜನಿಕ ವಲಯದಲ್ಲಿ ನಾಳೆಯ ಚುನಾವಣೆ ಫಲಿತಾಂಶದ ಬಗ್ಗೆ ನಡೆಯುತ್ತಿರುವ ತರಹೇವಾರಿ ಹಸಿಬಿಸಿ ಚರ್ಚೆಯಿಂದಾಗಿ ಹಳೇ ಅಭ್ಯರ್ಥಿಗಳಲ್ಲಿ ಗೊಂದಲವೂ ಸೃಷ್ಟಿಯಾದಂತಿದೆ. ಹೊಸ್ತಿಲ ಹುಣ್ಣಿಮೆಯ ಎಫೆಕ್ಟ್‍ನಿಂದ ಜನರು ಆಡಿಕೊಳ್ಳುತ್ತಿರುವ ಮಾತುಗಳು ನಿಜವಾಗಿ ಮತ್ತೆ ಈ ಸಲವೂ ಚುನಾವಣೇಲಿ ಸೋತು ಸುಣ್ಣವಾಗ್ತೀವಾ ಅನ್ನೋ ಅನುಮಾನಗಳು ಹಳೇ ಅಭ್ಯರ್ಥಿಗಳಲ್ಲಿ ಕಾಡಲು ಶುರುವಾದಂತಿವೆ.

ಕಂಪ್ಲಿಯ ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ಧತೆ:
ತಾಲೂಕಿನ 10 ಗ್ರಾಪಂಗಳಿಗೆ ಕಳೆದ ಡಿ.22ರ ಮಂಗಳವಾರದಂದು ಒಟ್ಟು 67 ಕ್ಷೇತ್ರಗಳ 183 ಸ್ಥಾನಗಳಿಗೆ 93 ಮತಗಟ್ಟೆಗಳಲ್ಲಿ ಜರುಗಿದ ಚುನಾವಣೆಯಲ್ಲಿ 437 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದರು. ಇದೀಗ ಡಿ.30ರ ಬುಧವಾರದಂದು ಪಟ್ಟಣದ ಎಸ್‍ಜಿವಿವಿಎಸ್ ಮತ ಎಣಿಕೆ ಕೇಂದ್ರದಲ್ಲಿ ಜರುಗಲಿರುವ ಮತ ಎಣಿಕೆ ಹಾಗೂ ಚುನಾವಣಾ ಫಲಿತಾಂಶ ಪ್ರಕ್ರಿಯೆಗೆ ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ನಾಳೆ ನಡೆಯಲಿರುವ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಾಗಿ ಒಟ್ಟು 24 ಮತ ಎಣಿಕೆ ಟೇಬಲ್‍ಗಳನ್ನೊಳಗೊಂಡ 04 ಮತ ಎಣಿಕೆ ಕೊಠಡಿಗಳನ್ನು ರಚಿಸಲಾಗಿದೆ. 26 ಮೇಲ್ವಿಚಾರಕರು ಹಾಗೂ 50 ಸಹಾಯಕರನ್ನು ನಿಯೋಜಿಸಲಾಗಿದ್ದು ಒಟ್ಟು 76 ಮಂದಿ ಸಿಬ್ಬಂದಿಗಳು ಮತ ಎಣಿಕೆ ಕಾರ್ಯ ನಿರ್ವಹಿಸಲಿದ್ದಾರೆ.
ಡಿ.30ರ ಬುಧವಾರ ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿರುವ ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆ ಕೇಂದ್ರದ ಬಳಿ ಶಾಂತಿ ಹಾಗೂ ಭದ್ರತೆ ಪಾಲನೆ ಹಿನ್ನೆಲೆ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತಲು 200 ಮೀಟರ್ ಅಂತರದಲ್ಲಿ ಕಲಂ 144 ಸಿಎಲ್‍ಒಸಿ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು ಮತ ಎಣಿಕೆ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟ್‍ರು ಕಡ್ಡಾಯ ಮಾಸ್ಕ್‍ಧಾರಣೆ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇನ್ನು ಅಭ್ಯರ್ಥಿಗಳ ಬೆಂಬಲಿಗರು ಸೇರಿದಂತೆ ಸಾರ್ವಜನಿಕರು ಯಾರೂ ಕೂಡ ಮತ ಎಣಿಕೆ ಕೇಂದ್ರದ ಬಳಿ ಬಂದು ಜಮಾಯಿಸದ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗ್ರಾಪಂ ಎಲೆಕ್ಷನ್ ರಿಸಲ್ಟಗೆ ಶುರು ಕೌಂಟ್‍ಡೌನ್.. ಯಾರು ಇನ್..? ಯಾರು ಔಟ್..?:
ಗ್ರಾಪಂ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆ ಫಲಿತಾಂಶದ ದಿನದಂದೇ ಹೊಸ್ತಿಲ ಹುಣ್ಣಿಮೆ ಕೂಡಿಬಂದಿದ್ದು, ಹುಣ್ಣಿಮೆಯ ಎಫೆಕ್ಟ್ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿರುವ ಅದ್ಯಾವೆಲ್ಲಾ ಅಭ್ಯರ್ಥಿಗಳಿಗೆ ಲಕ್ ನೀಡುತ್ತೋ.. ಅದ್ಯಾರನ್ನೆಲ್ಲಾ ಚುನಾವಣಾ ಅಖಾಡದಿಂದ ಔಟ್ ಆಗುವಂತೆ ಮಾಡುತ್ತೋ..? ಈ ಎಲ್ಲಾ ಬಗೆಬಗೆಯ ಪ್ರಶ್ನೆಗಳಿಗೆಲ್ಲಾ ನಾಳೆ ಮಧ್ಯಾಹ್ನದಷ್ಟೊತ್ತಿಗೆ ಸ್ಪಷ್ಟ ಉತ್ತರ ದೊರಕಲಿದ್ದು ನಾಳೆವರೆಗೂ ಕಾಯಲೇಬೇಕಿದೆ.