ಗ್ರಂಥಾಲಯ ವೃತ್ತಿ ಕೌಶಲ್ಯ ಪಡೆದರೆ ಉತ್ತಮ ಅವಕಾಶಗಳಿವೆ : ಪ್ರೊ. ಬಿರಾದಾರ

ಕಲಬುರಗಿ.ಮೇ.27: ಭಾರತದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಿಂದ ಸಾಕಷ್ಟು ಬದಲಾವಣೆಗೊಂಡಿದೆ. ಗ್ರಂಥಾಲಯ ವಿಜ್ಞಾನ ಕಲಿಕೆ ಸಾಮಥ್ರ್ಯದ ಜೊತೆಗೆ ವೃತ್ತಿಪರ ಕೌಶಲ್ಯ ಜ್ಞಾನ ಬೆಳೆಸಿಕೊಂಡರೆ ಯುವಕರಿಗೆ ಹೊಸ ಹೊಸ ಉದ್ಯೋಗ ಮತ್ತು ವೃತ್ತಿ ಅವಕಾಶಗಳನ್ನು ಪಡೆಯಬಹುದು ಎಂದು ಬೀದರ್ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ. ಬಿ. ಎಸ್. ಬಿರಾದಾರ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಂಥನ ಸಭಾಂಗಣದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ಕಲ್ಯಾಣ ಕರ್ನಾಟಕ ಗ್ರಂಥಾಲಯ ಸಂಘದ ಸಹಯೋಗದಲ್ಲಿ ಆಯೋಜಿಸಿದ ‘ಭಾರತದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಶಿಕ್ಷಣ’ ವಿಷಯ ಕುರಿತು ವಿಚಾರ ಸಂಕಿರಣ ಹಾಗೂ ಸೇವಾ ನಿವೃತ್ತರಾದ ಪ್ರೊ. ಡಿ. ಬಿ. ಪಾಟಿಲ್ ಅವರ ಸನ್ಮಾನ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ದೇಶದಲ್ಲಿ ಸುಮಾರು ಶತಮಾನಗಳ ನಂತರ ಗ್ರಂಥಾಲಯ ವಿಜ್ಞಾನ ವಿಷಯ ಬರೋಡ ಸ್ಕೂಲಿನಲ್ಲಿ ಆರಂಭದ ನಂತರ ಇದರ ಕಲಿಕೆಗೊಂದು ವಿಶೇಷ ಒತ್ತು ನೀಡಲಾಯಿತು. ಇಂದು ದೇಶ ವಿದೇಶಗಳಲ್ಲಿ ಗ್ರಂಥಾಲಯ ಶಿಕ್ಷಣವನ್ನು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಹತ್ವದ ವಿಷಯವಾಗಿ ಪರಿಗಣಿಸಲಾಗಿದೆ. ಸಾಕಷ್ಟು ಬದಲಾವಣೆ ಕಂಡಿರುವ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರ ಡಿಜಿಟಲ್ ಸ್ಪರ್ಶದೊಂದಿಗೆ ಅಗತ್ಯ ಗ್ರಂಥ ಮಾಹಿತಿ ಕ್ಷಣಾರ್ಧದಲ್ಲಿ ಓದುಗರಿಗೆ ಸಿಗುವಂತಾಗಿದೆ. ಗ್ರಂಥಪಾಲನೆ ವೃತ್ತಿಗೆ ವಿಶೇಷ ಮನ್ನಣೆ ದೊರೆತು ಪ್ರಸ್ತುತ ವೃತ್ತಿ ಘನತೆ ಹೆಚ್ಚಿದೆ. ವ್ಯವಸ್ಥೆ ಬೆಳವಣಿಗೆಯೊಂದಿಗೆ ವ್ಯಕ್ತಿ ಬೆಳೆಯುತ್ತಿದ್ದಾನೆ. ವ್ಯಕ್ತಿ ಬೆಳೆದಂತೆ ವ್ಯವಸ್ಥೆಯು ವೇಗವಾಗಿ ಪ್ರಗತಿ ಕಾಣುತ್ತಿದೆ. ಇದಕ್ಕೆ ಗ್ರಂಥಾಲಯ ಕೇಳದ್ರಗಳೇ ಸಾಕ್ಷಿಯಾಗಿವೆ ಎಂದರು.
ವಿಶ್ವವಿದ್ಯಾಲಯ ಧನಸಹಾಯವು ಗ್ರಂಥಾಲಯ ಶಿಕ್ಷಣದಲ್ಲಿ ಪದವಿ ಪಠ್ಯಕ್ರಮ, ಸಂಸೋಧನೆ ಮತ್ತು ಕೌಶಲ್ಯ ಆಧಾರಿತ ವಿಷಯಗಳನ್ನು ಅಳವಡಿಸಿ ಕಲಿಸಲು ಹೆಚ್ಚು ಒತ್ತು ನೀಡಿದೆ. ಸೂಕ್ತ ವೃತ್ತಿ ತರಬೇತಿ, ಕೌಶಲ್ಯ ಸಾಧಿಸಿ ವೃತ್ತಿಗಳಿಸಲು ಪ್ರೋತ್ಸಾಹ ನೀಡುತ್ತಿದೆ. ಭವಿಷ್ಯದಲ್ಲಿ ಪದವೀಧರರಿಗೆ ಅತ್ಯುತ್ತಮ ಅವಕಾಶಗಳು ಸಿಗಲಿವೆ ಎಂದ ಅವರು ವಿಭಾಗದ ಮುಖ್ಯಸ್ಥ ಡಾ. ಡಿ. ಬಿ. ಪಾಟಿಲ್ ಅವರು ಸರಳ ವ್ಯಕ್ತಿತ್ವದ ಜೀವಿ. ಸುಮಾರು 30 ವರ್ಷಗಳ ಸುದೀರ್ಘವಾಗಿ ಬೋಧನೆ, ಸಂಶೋಧನೆ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ ಬದುಕು ರೂಪಿಸಿದ್ದಾರೆ. ಅವರ ಸೇವಾ ನಿವೃತ್ತಿಯ ದಿನ ವಿಚಾರ ಸಂಕಿರಣ ಆಯೋಜಿಸಿರುವುದು ನಿಜಕ್ಕು ಹೆಮ್ಮೆಯ ವಿಷಯ ಎಂದು ಹೇಳಿದರು.
ಪ್ರಭಾರೆ ಕುಲಪತಿ ಹಾಗೂ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ವಿ. ಟಿ. ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆಯಾಗಿ ಸಾಧನೆ ಮಾಡಿ ವಿಭಾಗದ ಕೀರ್ತಿ ಹೆಚ್ಚಿಸಿದ್ದಾರೆ. ವೃತ್ತಿ ಆರಂಭ ಮತ್ತು ಸೇವಾ ನಿವೃತ್ತಿ ಮಧ್ಯೆ ವ್ಯಕ್ತಿ ಮಾಡಿದ ಸಾಧನೆಯೇ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಪ್ರೇರಣೆ ಇಂದು ನಿವೃತ್ತರಾಗುತ್ತಿರುವ ಪ್ರೊ. ಡಿ. ಬಿ. ಪಾಟಿಲ್ ಅವರ ಸರಳತೆ, ಶಿಸ್ತು ಕಾರ್ಯಕ್ಷಮತೆ ಮತ್ತು ಕಾರ್ಯವೈಖರಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದ ಅವರು ಈ ಹಿಂದೆ ವಿಭಾಗದಲ್ಲಿ ಸೇವೆ ಸಲ್ಲಿಸ ನಿವೃತ್ತರಾದ ಪ್ರೊ. ಬಿ. ಎಸ್. ಮಹೇಶ್ವರಪ್ಪ, ಪ್ರೊ. ಎನ್. ಪಾರ್ವತಮ್ಮ, ಪ್ರೊ. ಲಲಿತಾ ಸ್ವಾಮಿ, ಪ್ರೊ. ತಡಸದ ಮುಂತಾದವರ ಸೇವೆಯನ್ನು ಸ್ಮರಿಸಿದರು.
ವಿಶ್ವವಿದ್ಯಾಲಯ ಗಂಥಪಾಲಕ ಡಾ. ಸುರೇಶ್ ಜಂಗೆ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಂಥಾಲಯ ಮಾಹಿತಿ ವಿಜ್ಞಾನ ಇಂದು ಶೈಕ್ಷಣಿಕ ವೃತ್ತಿ ಅವಕಾಶಗಳನ್ನು ಸೃಷ್ಠಿಸಿದೆ. ಭಾಷಾ ಜ್ಞಾನದಿಂದ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾದರೆ ಉತ್ಸಾಹ ಮತ್ತು ಆಸಕ್ತಿಯಿಂದ ಕಲಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು. ವಿಶ್ವವಿದ್ಯಾಲಯದಿಂದ ಸೇವಾ ನಿವೃತ್ತರಾದ ಪ್ರೊ. ಡಿ.ಬಿ. ಪಾಟೀಲ್ ಹಾಗೂ ಶ್ರೀಮತಿ ಲಲಿತಾ ಪಾಟಿಲ್ ದಂಪತಿಗಳನ್ನು ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಕಲ್ಯಾಣ ಕರ್ನಾಟಕ ಗ್ರಂಥಾಲಯ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರೊ. ಡಿ. ಬಿ. ಪಾಟಿಲ್ ಅವರ ಜೀವನ ಸಾಧನೆ ಕುರಿತು ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ವಿಶ್ವವಿದ್ಯಾಲಯದ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಕುಟುಂಭವರ್ಗದವರು ಉಪಸ್ಥಿತರಿದ್ದರು. ಕೃಷ್ಣ ಪ್ರಾರ್ಥಿಸಿದರು. ಡಾ. ಪ್ರಕಾಶ ವಾಘ್ಮೋರೆ ಸ್ವಾಗತಿಸಿದರು. ಅತಿಥಿ ಉಪನ್ಯಾಸಕಿ ಡಾ. ರಾಜೇಶ್ವರಿ ವಂದಿಸಿದರು. ಅಫಜಲಪುರ ಪ್ರಥಮ ದರ್ಜೆ ಕಾಲೇಜಿನ ಗಂಥಪಾಲಕಿ ಡಾ. ಸಾವಿತ್ರಿ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.