ಗ್ರಂಥಾಲಯ ಮತ್ತು ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಬದ್ದ

ಮಾದನಹಿಪ್ಪರಗಿ:ಆ.22: ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷೆ ಸುವರ್ಣಾ ಈರಣ್ಣ ಮೈಂದರಗಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.

ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಅವರು ಎಲ್ಲಾ ಸದಸ್ಯರನ್ನು ಸ್ವಾಗತಿಸಿ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಓದಿ ಹೇಳಿದರು. ಪಂಚಾಯಿತಿ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಡಲು ಜಾಗವಿಲ್ಲ. ಓದುಗರನ್ನು ಕೂಡಲು ಸ್ಥಳ ಅಭಾವದ ಬಗ್ಗೆ ಸಾರ್ವಜನಿಕರ ಒತ್ತಾಸೆಯಂತೆ ತಾಲಾಕಾ ಪಂಚಾಯತ ಅಧಿಕಾರಿಗಳು ಗ್ರಾಮ ಪಂಚಾಯತ ಕಟ್ಟಡ ನಿರ್ಮಾಣಕ್ಕೆ ಜಾಗ ಗೊತ್ತು ಮಾಡಿಕೊಡುವುದು ಮತ್ತು ಕೃಷಿ ಮಾರುಕಟ್ಟೆಗೆ ಸ್ಥಳ ಕೂಡಾ ಗೊತ್ತು ಮಾಡಿಕೊಡುವಂತೆ ಸೂಚಿಸಿದ್ದಾರೆ ಎಂದು ಪಿಡಿಒ ಸಭೆಯಲ್ಲಿ ಹೇಳಿದರು. ಗ್ರಂಥಾಲಯ ನಿರ್ಮಾಣಕ್ಕಾಗಿ ಗ್ರಾಮ ಸೇವಕರ ಕ್ವಾಟರ್ಸನ್ನು ನೆಲಸಮ ಮಾಡಲಾಗಿತ್ತು. ಅದೇ ಜಾಗದಲ್ಲಿ ನಿರ್ಮಿಸಲು ಕೆಲ ಸದಸ್ಯರು ಸೂಚಿಸಿದರು. ಮತ್ತೆ ಕೆಲ ಸದಸ್ಯರು ಆ ಸ್ಥಳ ಗ್ರಾಮ ಪಂಚಾಯಿತಿ ಸದ್ಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆಂದು ಸಭೆಯಲ್ಲಿ ತಿಳಿಸಿದಾಗ ಗದ್ದಲ ಶುರುವಾಯಿತು. ಅವರೊಬ್ಬರೆ ಪಂಚಾಯಿತಿ ಜಾಗ ಒತ್ತುವರಿ ಮಾಡಿಕೊಂಡಿಲ್ಲ. ಹಿಂದಿನ ಪಂಚಾಯತ ಅಧ್ಯಕ್ಷರು ಸದ್ಯರು ಗ್ರಾಮದ ತುಂಬಾ ಭೂ ಕಬಳಿಕೆ ಮಾಡಿಕೊಂಡಿದ್ದಾರೆ. ಅವರ ಎಲ್ಲಾ ಜಾಗವೆಲ್ಲಾ ಖಾಲಿ ಮಾಡಿದರೆ ನಾನು ಖಾಲಿ ಮಾಡುತ್ತೇನೆಂದು ಒತ್ತುವರಿ ಮಾಡಿಕೊಂಡಿದ್ದ ಸದಸ್ಯರು ಹೇಳಿದರು. ಈ ಮಧ್ಯೆ ಪರ ವಿರೋಧ ಮಾತಿನ ಚಕಮಕಿ ಶುರುವಾಯಿತು. ದಶಕದ ಹಿಂದೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೆಸರಿಗೆ ಜಾಗವೊಂದನ್ನು ಬರೆದು ಕೊಡಲಾಗಿತ್ತು. ಆ ಜಾಗವನ್ನು ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿದ್ದಾರೆ. ಅದನ್ನು ತೆರವು ಮಾಡಿ ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮತ್ತು ಎಪಿಎಮ್‍ಸಿಗೂ ಕೂಡಾ ಅದರ ಹೆಸರಿಗೆ ಬರೆದ ಜಾಗದಲ್ಲಿಯೇ ನಿರ್ಮಿಸಲು ತೀರ್ಮಾನಿಸಲಾಯಿತು. ಗ್ರಾಮ ಪಂಚಾಯತಿಯ ವಾಣಿಜ್ಯ ಮಳಿಗೆಯಿಂದ ಬಾಡಿಗೆ ಬರುತ್ತಿಲ್ಲ. ಮತ್ತು ಅವುಗಳ ಮಾಲೀಕರು ಒಪ್ಪಂದದ ಕರಾರು ಮೀರಿ ನಡೆದಿದ್ದಾರೆ. ಅಂತವರಿಗೆ ನೋಟಿಸ ಕೊಟ್ಟು ಮುಲಾಜಿಲ್ಲದೆ ತೆಗೆದು ಹಾಕಿರಿ ಎಂದು ಸದಸ್ಯರು ಪಿಡಿಒ ಅವರಿಗೆ ಹೇಳಿದರು. ಗೃಹ ಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭ, ವಸತಿ ಯೋಜನೆ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ, ಸಿಬ್ಬಂಧಿಗಳಾದ ಸುರೇಶ ರೂಗಿ, ಮಹೇಶ ಸಿಂಗೆ ಇದ್ದರು.