ಗ್ರಂಥಾಲಯ ನಿರ್ವಹಣೆ ಹೆಸರಿನಲ್ಲಿ ಹಣ ದುರುಪಯೋಗ

ಹನೂರು ಏ.20:- ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಗ್ರಂಥಾಲಯ ಕೇಂದ್ರ ಇಲ್ಲದಿದ್ದರೂ ಇದರ ನಿರ್ವಹಣೆ ಹೆಸರಿನಲ್ಲಿ 40 ಸಾವಿರ ರೂ. ಹಣವನ್ನು ದುರುಪಯೋಗ ಮಾಡಿಕೊಂಡಿರುವ ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯ ಇಲ್ಲದಿದ್ದರೂ ಗ್ರಾಮ ಪಂಚಾಯತಿ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಇವರು ಗ್ರಂಥಾಲಯದ ನಿರ್ವಹಣೆಗೆ 40 ಸಾವಿರ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ.
ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಶಿವಕುಮಾರ್ ಮತ್ತು ಕಂಪ್ಯೂಟರ್ ಆಪರೇಟರ್ ಆನಂದ್ ಅವರು ಗ್ರಂಥಾಲಯ ನಿರ್ವಹಣೆ ಹೆಸರಿನಲ್ಲಿ 40,000 ಹಣ ಡ್ರಾ ಮಾಡಿರುವ ಬಗ್ಗೆ ಕಳೆದ ಮಾರ್ಚ್ ತಿಂಗಳ15 ರಂದು ಸಂಜೆವಾಣಿ ಪತ್ರಿಕೆಯಲ್ಲಿ ವರದಿ ಮಾಡಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ವರದಿಗೆ ಎಚ್ಚೆತ್ತ ತಾಲೂಕು ತಾಲೂಕು ಇ ಒ ಶ್ರೀನಿವಾಸ್ ಅವರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಇದರ ಬಗ್ಗೆ ವರದಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾದರು ಇದಕ್ಕೆ ಕ್ಯಾರೆ ಎನ್ನದೆ ಮೇಲಾಧಿಕಾರಿಗಳ ಭಯವು ಇಲ್ಲದ ಪಿಡಿಒ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ತಿಳಿದು ಬಂದಿದೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದ ಪಿಡಿಒ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ತಾಲೂಕು ಪಂ. ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ.
ಪಿಡಿಒ ಶಿವಕುಮಾರ್ ಮತ್ತು ಕಂಪ್ಯೂಟರ್ ಆಪರೇಟರ್ ಆನಂದ್ ರವರು ಗ್ರಾಮದ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಪ್ರತ್ಯಕ್ಷವಾಗಿ ಕಂಡು ಬಂದಿದ್ದು ಇನ್ನಾದರು ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ.