ಗ್ರಂಥಾಲಯ ಜ್ಞಾನ ಭಂಡಾರದ ಕೇಂದ್ರಗಳು

ಕೋಲಾರ,ಜು.೩೦-ಸಮಾಜದ ಚರಿತ್ರೆ ತಿಳಿಯಲು ಪ್ರತಿಯೊಬ್ಬ ವ್ಯಕ್ತಿಯು ಪುಸ್ತಕಗಳನ್ನು ಓದಬೇಕಾಗಿದೆ, ಜ್ಞಾನ ಕೊಡುವ ಪುಸ್ತಕಗಳು ವ್ಯಕ್ತಿಯ ಸಾಧನೆ ಮಾರ್ಗದಲ್ಲಿ ಮತ್ತು ಸಮಾಜದ ಪ್ರಗತಿಯ ದಾರಿಯಲ್ಲಿ ಸಾಗುವುದಕ್ಕೆ ಕಾರಣವಾಗುತ್ತವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ ಪಿಡಿಒಗಳಿಗೆ ಒಂದು ದಿನದ ಗಟ್ಟಿ ಓದು ಕಾರ್ಯಾಗಾರದಲ್ಲಿ ಮಾತನಾಡಿ, ಸಮಾಜದಲ್ಲಿ ಜನ ಸಾಯಬಹುದು, ಆದರೆ ಪುಸ್ತಕಗಳಿಗೆ ಯಾವತ್ತೂ ಸಾವು ಅನ್ನುವುದು ಇರಲ್ಲ ಇತಿಹಾಸದಲ್ಲಿ ಸಾಧನೆ ಮಾಡಿದ ಅನೇಕರು ಪುಸ್ತಕಗಳನ್ನು ಓದಿನಿಂದ ಸ್ಪೂರ್ತಿ ಪಡೆದಿದ್ದಾರೆ ಎಂದರು.
ಸಮಾಜದಲ್ಲಿನ ಆಗು ಹೋಗುಗಳನ್ನು ತಿಳಿಯಲು ಗ್ರಂಥಾಲಯಗಳು ಕೂಡ ಸಹಕಾರಿಯಾಗಿವೆ ಮನುಷ್ಯ ನೆಮ್ಮದಿಯಾಗಿ ಬದುಕಲು ಶಿಕ್ಷಣ, ಆರೋಗ್ಯ, ಉದ್ಯೋಗದ ಜೊತೆಗೆ ರೈತರನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗಿದೆ, ಗ್ರಂಥಾಲಯಗಳ ಮೇಲ್ವಿಚಾರಕರ ಸಮಸ್ಯೆಗಳ ಬಗ್ಗೆ ಈಗಾಗಲೇ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರೊಂದಿಗೆ ಮಾತನಾಡಿ ಆದಷ್ಟು ಬೇಗ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಪುಸ್ತಕಗಳ ಓದು ಇಲ್ಲದೇ ಇದ್ದರೆ ವ್ಯಕ್ತಿಯ ಜ್ಞಾನ ಕೋಶದ ಸಂಗ್ರಹ ಸೀಮಿತವಾಗಿ ಬಿಡುತ್ತದೆ, ವಯಸ್ಸಿನ ಮಿತಿ ಇಲ್ಲದೇ ಓದಿನ ಅಭಿರುಚಿ ಹೆಚ್ಚಾಗಬೇಕು, ಪುಸ್ತಕಗಳ ಓದುವ ಪ್ರವೃತ್ತಿ ಪ್ರತಿ ಮನೆಯಲ್ಲಿ ಮುಂದುವರಿಯಬೇಕು, ಆಧುನಿಕ ತಂತ್ರಜ್ಞಾನದ ಸಾಧನಗಳಲ್ಲಿ ನಾನಾ ಮಾಹಿತಿಗಳು ಸಿಗುತ್ತಿದ್ದರೂ ಪುಸ್ತಕದ ಓದು ನೀಡುವ ಸಂತೋಷ ಮತ್ತು ಪರಿಪೂರ್ಣ ಜ್ಞಾನ ಸಿಗಲು ಸಾಧ್ಯವಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳ ಉದ್ದೇಶವನ್ನು ತಿಳಿಸಬೇಕಾಗಿದೆ ಎಂದರು.