
ಭಾಲ್ಕಿ:ಆ.14: ಗ್ರಂಥಾಲಯವು ಜ್ಞಾನ ದೇಗುಲವಾಗಿದೆ. ಜ್ಞಾನಾರ್ಜನೆಗಾಗಿ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಿ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅದ್ಯಕ್ಷ ನಾಗಭೂಷಣ ಮಾಮಡಿ ಹೇಳಿದರು.
ಪಟ್ಟಣದ ನಗರ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ನಡೆದ ಗ್ರಂಥಾಲಯ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕದಲ್ಲಿನ ಶಬ್ದ ಕೋಶ, ಜ್ಞಾನ ಭಂಡಾರ ನಮ್ಮ ಮನಸ್ಸು ಪ್ರಫುಲ್ಲ ಗೊಳಿಸುತ್ತದೆ. ಪುಸ್ತಕ ಹೊಂದಿರುವ ವ್ಯಕ್ತಿಗೆ ಬೇಸರವೆನ್ನುವುದೇ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪುಸ್ತಕ ಓದಿ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಓದುವವರು ಕಡಿಮೆಯಾಗುತ್ತಿದ್ದಾರೆ. ಮೊಬೈಲ್ ಗೀಳಿನಿಂದ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವವರ ಸಂಖೆ ಕ್ಷೀಣಿಸುತ್ತಲಿದೆ. ತಂತ್ರಜ್ಞಾನ ಎಷ್ಟೇ ಮುಂದು ವರೆದರೂ, ಮುದ್ರಣ ವ್ಯವಸ್ಥೆಯಲ್ಲಿ ಶಕ್ತಿ ಅಡಗಿದೆ. ಪುಸ್ತಕ ಮತ್ತು ಮುದ್ರಿತ ಪತ್ರಿಕೆಗಳನ್ನು ಓದುವುದರಿಂದ ಮನಸ್ಸು ಅರಳುತ್ತದೆ. ಜ್ಞಾನ ಭಂಡಾರ ತುಂಬಿಕೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಗ್ರಂಥಾಲಯಕ್ಕೆ ಆಗಮಿಸಿ ಪುಸ್ತಕ ಓದುವ ಪರಿಪಾಠ ಹಾಕಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಹಾಗು ನಿವೃತ್ತ ಗ್ರಂಘಪಾಲಕ ಶಿವಶರಣಪ್ಪ ಛತ್ರೆ, ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆಯವರ ಮುತುವರ್ಜಿಯಿಂದ ಭಾಲ್ಕಿಯಲ್ಲಿ ಉತ್ತಮ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿಯೂ ಇಲ್ಲಾ. ಸಾರ್ವಜನಿಕರು ಈ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇವೇಳೆ ಗ್ರಂಥಪಾಲಕ ನಿಂಗಣ್ಣ ಗಚ್ಚಿನಮನಿಯವರು ಓದುಗ ಮಿತ್ರರಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿ, ಪುಸ್ತಕದಲ್ಲಿ ಅಡಗಿದೆ ಅದ್ಭುತವಾದ ನಿಧಿ, ಅದನ್ನು ಓದುಗರು ಅರಗಿಸಿಕೊಂಡರೆ ಯಾರಿಂದಲೂ ಕದಿಯಲಾಗುವುದಿಲ್ಲ. ಪುಸ್ತಕದಿಂದ ಗೆಳೆತನ ಮಾಡಿದರೆ, ಮುಂದೊಂದುದಿನ ಜಗತ್ತೇ ನಮ್ಮ ಸ್ನೇಹಕ್ಕಾಗಿ ಕೈ ಚಾಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್‍ಐ ವಿಶ್ವನಾಥ ಬಳಕಟ್ಟೆ, ಚಂದ್ರಕಾಂತ ತಳವಾಡೆ, ಗಣೇಶ ವಾಡೆ, ಜಗನ್ನಾಥ, ಶ್ರೀನಾಥ ಬಿರಾದಾರ, ಜ್ಯೋತಿಕಿರಣ ಕಲ್ಯಾಣೆ, ದೀಪಕ ಥಮಕೆ, ಪವನ ಕಲವಾಡಿ ಉಪಸ್ಥಿತರಿದ್ದು.
ನಿಂಗಣ್ಣ ಸ್ವಾಗತಿಸಿದರು. ಚಂದ್ರಕಾಂತ ನಿರೂಪಿಸಿದರು. ಪವನ ವಂದಿಸಿದರು.