ಗ್ರಂಥಾಲಯ ಕಾಮಗಾರಿಗೆ ಭೂಮಿ ಪೂಜೆ

ನರಗುಂದ,ನ21-ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷ ಮುಂದಿನ ಎರಡೂವರೆ ವರ್ಷದ ಆಡಳಿತಾವಧಿ ಪೂರ್ಣಗೊಳಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಜಯಭೇರಿಯಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು.
ನರಗುಂದ ಪಟ್ಟಣದಲ್ಲಿ 5.5 ಕೋಟಿ ರೂ.ವೆಚ್ಚದ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಬರುತ್ತಿರುವ ಕಪೋಲಕಲ್ಪಿತ ಸುದ್ದಿಗಳನ್ನು ನಂಬಬೇಡಿ. ಸರಕಾರ ಗಟ್ಟಿಯಾಗಿದೆ. ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಸರಕಾರ ಆಡಳಿತದಲ್ಲಿ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು. ಈ ಕನಸು ಈಗ ನನಸಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಾವನಾ ಪಾಟೀಲ, ಎ.ಎಂ.ಹುಡೇದ, ಪುರಸಭೆ ಮುಖ್ಯಾಧಿಕಾರಿ ಬ್ಯಾಳಿ, ತಾಲೂಕಾ ದಂಡಾಧಿಕಾರಿ ಮಹೇಂದ್ರ, ಗ್ರಂಥಾಲಯ ಅಧಿಕಾರಿ ವೆಂಕಟೇಶವರಿ ಉಪಸ್ಥಿತರಿದ್ದರು.