
ಕುಣಿಗಲ್, ಜು. ೨೬- ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಗೊಂಡು ಸೋರುತ್ತಿದ್ದು ಓದುಗರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮಾಜಿ ಸೈನಿಕರ ತಾಲ್ಲೂಕು ಸಂಘದ ಅಧ್ಯಕ್ಷ ರಮೇಶ್ ಆಗ್ರಹಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಗ್ರಂಥಾಲಯ ಕಟ್ಟಡವು ಶಿಥಿಲಗೊಂಡಿದ್ದು ಮಳೆ ಬಂದರೆ ಸೋರುತ್ತಿದ್ದು ಗ್ರಂಥಾಲಯದಲ್ಲಿರುವ ಪುಸ್ತಕಗಳು ನೆನೆದು ಹಾಳಾಗುತ್ತಿವೆ. ಇಲ್ಲಿ ಓದಲು ಬರುವ ಓದುಗರಿಗೆ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಯಾವುದೇ ಮೂಲ ಸೌಲಭ್ಯ ಇಲ್ಲದೆ ಓದುಗರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಶಾಸಕರಾಗಲಿ, ಪುರಸಭಾ ಅಧ್ಯಕ್ಷರಾಗಲಿ ಈ ಗ್ರಂಥಾಲಯದ ಬಗ್ಗೆ ಗಮನ ಹರಿಸದೆ ಇರುವುದು ದುಃಖಕರ ವಿಷಯ ಎಂದಿದ್ದಾರೆ.
ಮಾಜಿ ಸಚಿವರುಗಳಾದ ವೈ.ಕೆ. ರಾಮಯ್ಯ, ಡಿ.ನಾಗರಾಜಯ್ಯ, ಮಾಜಿ ಶಾಸಕ ಎಚ್. ನಿಂಗಪ್ಪ, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಹಾಗೂ ಅಂದಿನ ಪುರಸಭಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಓದುಗರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸಂತೆ ಮೈದಾನದಲ್ಲಿ ೧೯೯೮ರಲ್ಲಿ ಗ್ರಂಥಾಲಯ ಕಟ್ಟಡವನ್ನು ದೇವೇಗೌಡರು ಉದ್ಘಾಟಿಸಿದ್ದರು. ಆದರೆ ಈ ಕಟ್ಟಡದಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯದ ಜತೆಗೆ ಲಕ್ಷಾಂತರ ರೂ. ಬೆಲೆ ಬಾಳುವ ಸರ್ಕಾರ ಹಾಗೂ ದಾನಿಗಳು ನೀಡಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಈ ತಾಲ್ಲೂಕಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಾದ ಐ.ಎ.ಎಸ್, ಐ.ಪಿ.ಎಸ್, ಡಾಕ್ಟರ್, ಇಂಜಿನಿಯರ್ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸರ್ಕಾರ ಲಕ್ಷಾಂತರ ರೂಪಾಯಿ ಪುಸ್ತಕ ಖರೀದಿಸಿ ಒದಗಿಸಿದ್ದರೂ ಸಹ ಅವುಗಳನ್ನು ಉಳಿಸಿಕೊಳ್ಳಲು ಜಾಗವಿಲ್ಲದೆ ಮೂಟೆ ಕಟ್ಟಿ ಇಡುವಂತಹ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಟ್ಟಡ ಶಿಥಿಲಗೊಂಡು ಸೋರುವಿಕೆಯಿಂದ ಪುಸ್ತಕಗಳು ಹಾಳಾಗುತ್ತಿವೆ. ಪುರಸಭಾ ವ್ಯಾಪ್ತಿಯಲ್ಲಿ ಬರುವ ಈ ಗ್ರಂಥಾಲಯಕ್ಕೆ ನಗರದ ನಾಗರಿಕರು ೬ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದರೆ ಆ ತೆರಿಗೆ ಹಣದಿಂದ ಮತ್ತು ಶಾಸಕರ ಅನುದಾನದಿಂದ ಉತ್ತಮ ಗ್ರಂಥಾಲಯ ನಿರ್ಮಿಸಿ ಶಿಥಿಲಗೊಂಡು, ಸೋರುತ್ತಿರುವುದನ್ನು ತಪ್ಪಿಸಿ ಉತ್ತಮ ಗ್ರಂಥಾಲಯ ನಿರ್ಮಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳು, ಪುರಸಭಾಧ್ಯಕ್ಷರಿಗೆ ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಆರ್. ರಮೇಶ್ ಸೇರಿದಂತೆ ಅನೇಕರು ಗ್ರಂಥಾಲಯದ ಶಿಥಿಲಗೊಂಡಿರುವುದನ್ನು ರಿಪೇರಿ ಮಾಡಿ ಪುಸ್ತಕಗಳ ಸಂರಕ್ಷಣೆ ಮಾಡಿ ಓದುಗರಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.