ಗ್ರಂಥಾಲಯವು ಇಂದಿನ ಯುಗದಲ್ಲಿ ಮೂಲಭೂತ ಅವಶ್ಯಕತೆಯಾಗಿದೆ: ಶಾಸಕ ರಹೀಮ ಖಾನ್

ಬೀದರ,ಮಾ.18: ಗ್ರಂಥಾಲಯವು ಇಂದಿನ ಯುಗದಲ್ಲಿ ಅತ್ಯಂತ ಮೂಲಭೂತ ಅವಶ್ಯಕತೆಯಾಗಿದೆ. ಬೀದರ ನಗರದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಆಗುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ ಎಂದು ಬೀದರ ಶಾಸಕ ರಹೀಮ ಖಾನ್ ಹೇಳಿದರು.

ಅವರು ಇತ್ತೀಚಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಮ್ಯಾಕ್ರೋ ಯೋಜನೆಯಡಿಯಲ್ಲಿ 250 ಲಕ್ಷ ರೂ. ಅನುದಾನದಲ್ಲಿ ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿ ಅವರು ಮಾತನಾಡಿ, ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯಗಳು ಹಿಂದೆಂದಿಗಿಂತಲೂ ಉತ್ತಮ ಸೇವೆಯನ್ನು ಒದಗಿಸುತ್ತಿವೆ. ಪ್ರತಿಯೊಬ್ಬರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಮಾತನಾಡಿ, ಐತಿಹಾಸಿಕ ನಗರ ಬೀದರನಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣ ಆಗುತ್ತಿರುವುದು ಸಂತಸ ಮೂಡಿಸಿದೆ. ಡಿಜಿಟಲ್ ಗ್ರಂಥಾಲಯದಲ್ಲಿ ಕರ್ನಾಟಕವು ಪ್ರಪಂಚದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಸಾರ್ವಜನಿಕ ಓದುಗರು ಹಾಗೂ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುವ ಮೂಲಕ ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ನೋಂದಣಿಯಾಗುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೀದರ ನಗರ ಸಭೆ ಸದಸ್ಯ ಮಹಮದ್ ಗೌಸ್, ಪ್ರಶಾಂತ ದೊಡ್ಡಿ, ಅಭಿ ಕಾಳೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸುಭಾಷ, ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಅಜಯಕುಮಾರ, ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಶರಣಬಸಪ್ಪ, ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸಿದ್ದಾರ್ಥ ಭಾವಿಕಟ್ಟೆ, ಬೀದರ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸವಿತಾ, ಬೀದರ ನಗರ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ದೇವಿದಾಸ, ದೀಪಕ್ ಕಮತರ, ಬೀದರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಭಗವಾನ್‍ಸಿಂಗ್, ಬೀದರ ಲೋಕೋಪಯೋಗಿ ಇಲಾಖೆ ಉಪವಿಭಾಗದ ಅಭಿಯಂತರರು ಸುನೀಲ ಸೇರಿದಂತೆ ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.