ಗ್ರಂಥಾಲಯಗಳು ಮಕ್ಕಳ ಸ್ನೇಹಿಯಾಗಿರಲಿ


ಸಂಜೆವಾಣಿ ವಾರ್ತೆ
ಗಂಗಾವತಿ:ಜು,18- ಮಕ್ಕಳನ್ನು ಓದಿನತ್ತ ಕರೆತರಲು ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದ್ದು, ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಗ್ರಂಥಾಲಯಗಳಾಗಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಹೇಳಿದರು.
ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ ಗ್ರಂಥಾಲಯ ಇಲಾಖೆ ಹಾಗೂ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯಿಂದ ಆಯೋಜಿಸಿದ್ದ ಮೂರು ದಿನಗಳ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು.
ಗಂಗಾವತಿ, ಕನಕಗಿರಿ ಹಾಗೂ ಕಾರಟಗಿಯ ಅಖಂಡ ತಾಲೂಕಿನ ಎಲ್ಲ ಗ್ರಂಥಾಲಯಗಳು ಮಾದರಿ ಗ್ರಂಥಾಲಯಗಳಾಗಬೇಕು. ಗ್ರಂಥಾಲಯ ಮೇಲ್ವಿಚಾರಕರು ಸರಿಯಾದ ಸಮಯ ಪಾಲನೆ, ಶಿಶ್ತು ಪಾಲನೆ, ಮಕ್ಕಳ ಆಕರ್ಷಣೆಗೆ ತಕ್ಕಂತೆ ಪುಸ್ತಕ ಜೋಡಿಸುವುದು, ನಿತ್ಯ ಮಕ್ಕಳ ನೋಂದಣಿ ಮಾಡುವುದು, ಲೈಬ್ರರಿಯಲ್ಲಿ ಭಯ ಮುಕ್ತ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು  ಎಂದರು.
ವಿಶೇಷ ಚಟುವಟಿಕೆಗಳಾದ ಪುಸ್ತಕಗಳ ಪರಿಚಯ, ಗಟ್ಟಿ ಓದು ಅಭಿಯಾನ, ಸಣ್ಣಕಥೆಗಳ ಓದುವ ಹವ್ಯಾಸ, ಕ್ರೀಡೆಗಳನ್ನು ಆಯೋಜಿಸಿ ಮಕ್ಕಳನ್ನು ಓದಿನತ್ತ ಕರೆತರಬೇಕು. ಬಾಲ್ಯದಲ್ಲೇ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವ ಕೆಲಸ ಆಗಬೇಕು. ಕಂಪ್ಯೂಟರ್ ಶಿಕ್ಷಣ ನೀಡಬೇಕು. ಇತ್ತೀಚೆಗೆ ಮಕ್ಕಳು ಮೊಬೈಲ್ ಗೀಳಿಗೆ ಬೀಳುತ್ತಿದ್ದಾರೆ, ಇವರನ್ನು ಅದರಿಂದ ಹೊರತಂದು ಗ್ರಂಥಾಲಯಕ್ಕೆ ಬರುವಂತೆ ಮಾಡಬೇಕಾದ ಜವಾಬ್ದಾರಿ ಗ್ರಂಥಾಲಯ ಮೇಲ್ವಿಚಾರಕರ ಮೇಲಿದೆ ಎಂದರು.
ಮೂರು ದಿನದ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ತಾಪಂ ತರಬೇತಿ ವಿಷಯ ನಿರ್ವಾಹಕರಾದ ಶಿವಮೂರ್ತಯ್ಯ, ಗಂಗಾವತಿ ಶಾಖಾ ಗ್ರಂಥಾಲಯದ ಸಹ ಮೇಲ್ವಿಚಾರಕರಾದ ಕವಿತಾ ಎಂ. ಮುರಾಳ, ಎಸ್ ಐಆರ್ ಡಿ ತರಬೇತಿ ಸಂಯೋಜಕರಾದ ಶೇಖರಪ್ಪ ಸಿಂದೋಗಿ ಸೇರಿ, ಗಂಗಾವತಿ, ಕನಕಗಿರಿ ಹಾಗೂ ಕಾರಟಗಿಯ ಎಲ್ಲ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.