ಗ್ರಂಥಾಲಯಗಳಿಗೆ ಡಿಜಿಟಲ್ ಸಲಕರಣೆಗಳ ವಿತರಣೆ

ಸಂಜೆವಾಣಿ ನ್ಯೂಸ್
ಮೈಸೂರು ನ 07 :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ದೇವರಾಜ್ ಅರಸ್ ಸಭಾಂಗಣದಲ್ಲಿ ನಡೆದ ಗ್ರಾಮೀಣ ಡಿಜಿ ವಿಕಸನ ಕಾರ್ಯಕ್ರಮದಡಿ ಮೈಸೂರು ಜಿಲ್ಲೆಯ 22 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಡಿಜಿಟಲ್ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮೈಸೂರು ಜಿಲ್ಲೆಯ 64 ಗ್ರಾಪಂ ಗ್ರಂಥಾಲಯಗಳಿಗೆ ಈಗಾಗಲೇ ಮೂರು ಹಂತಗಳಲ್ಲಿ ಡಿಜಿಟಲ್ ಸಲಕರಣೆಗಳ ವಿತರಿಸಲಾಗಿದೆ. ಅದರಂತೆ ನಾಲ್ಕನೇ ಹಂತದಲ್ಲಿ ನಂಜನಗೂಡು – 5 ಗ್ರಂಥಾಲಯ, ಟಿ.ನರಸೀಪುರ – 6 ಗ್ರಂಥಾಲಯ, ಮೈಸೂರು -5, ಪಿರಿಯಾಪಟ್ಟಣ ? 3, ಸರಗೂರು -3 ಒಟ್ಟು 22 ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಂಥಾಲಯಗಳನ್ನು ?ಅರಿವು ಕೇಂದ್ರ?ಗಳೆಂದು ಕರೆಯಲಾಗುತ್ತಿದ್ದು, ಅರಿವು ಕೇಂದ್ರಗಳನ್ನು ಡಿಜಿಟಲೀಕರಣ ಮತ್ತು ಉನ್ನತ ಮಟ್ಟದಲ್ಲಿ ಸೌಲಭ್ಯ ಒದಗಿಸುವ ಕೆಲಸವಾಗುತ್ತಿದೆ. ವಿವಿಧ ಎನ್ ಜಿಓ ಗಳ ಸಹಕಾರದೊಂದಿಗೆ ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಗ್ರಂಥಾಯಲಕ್ಕೆ ಆ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯವಿರುವ ಬೇಡಿಕೆಯನುಸಾರ ಪುಸ್ತಕಗಳನ್ನು ಹಾಗೂ ಸ್ಪರ್ಧಾತ್ಮಕ ಪುಸ್ತಕ, ನಿಯತಕಾಲಿಕೆಗಳನ್ನು ಒದಗಿಸಿದರೇ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಂಥಪಾಲಕರು ಗ್ರಾಪಂ ಪಿಡಿಓ ಅವರೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಖರೀದಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಸಲಕರಣೆಗಳನ್ನು ಬಳಸುವ ಪರಿ ಹೇಗೆ ಎಂಬುದರ ಬಗ್ಗೆ ಒಂದು ದಿನದ ತರಬೇತಿ ನಡೆಯುತ್ತಿದ್ದು, ಅದರಂತೆ ಗ್ರಂಥಾಲಯಕ್ಕೆ ಒದಗಿಸುತ್ತಿರುವ ಉಪಕರಣಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಎಲ್ಲರು ಕಾರ್ಯಪ್ರವೃತ್ತರಾಗಿ ಎಂದು ಹೇಳಿದರು.
ಶಿಕ್ಷಣ ಸಂಸ್ಥೆ ಜಿಲ್ಲಾ ವ್ಯವಸ್ಥಾಪಕರಾದ ಪ್ರಸನ್ನ ಕುಮಾರ್ ಅವರು ಮಾತನಾಡಿ, ಆರ್ ಡಿ ಪಿ ಆರ್ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿಯನ್ನು ಸಂಪೂರ್ಣ ಡಿಜಿಟಲ್ ಸಾಕ್ಷರತೆ ಮಾಡಲು ಮುಂದಾಗಿದ್ದು, ಅದರಂತೆ ಪ್ರತಿಯೊಂದು ಮನೆ ಮನೆ ಸರ್ವೆ ಮಾಡಿ ಡಿಜಿಟಲ್ ಸಾಕ್ಷರತೆ ಪ್ರಮಾಣ ಕ್ರೋಢಿಕರಿಸಲಾಗುತ್ತಿದೆ. ಅದರಂತೆ ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಮನೆಗಳಿಗೆ ಭೇಟಿ ನೀಡಿ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮ ಯಶಸ್ವಿಯಾದರೇ 236 ಗ್ರಾಮ ಪಂಚಾಯಿತಿಗಳಿಗೂ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ.ಎಂ. ಗಾಯಿತ್ರಿ ಅವರು ಡಿಜಿಟಲ್ ಸಲಕರಣೆಗಳನ್ನು ಗ್ರಾಪಂನ ಪಿಡಿಒ ಮತ್ತು ಗ್ರಂಥಪಾಲಕರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿಗಳಾದ ವಿ.ಪಿ.ಕುಲದೀಪ್, ಗ್ರಾಪಂ ನ ಪಿಡಿಒ ಮತ್ತು ಗ್ರಂಥಪಾಲಕರು ಮತ್ತು ಶಿಕ್ಷಣ ಸಂಸ್ಥೆಯ ತಾಲ್ಲೂಕು ಸಂಯೋಜಕರು ಸೇರಿ ಇತರರು ಇದ್ದರು.