ಗ್ಯಾಸ್ ಸ್ಟವ್, ಅಕ್ಕಿ, ನಗದು, ಬಟ್ಟೆ, ಕಾಫೀ-ಟೀ ಪುಡಿ ಮತ್ತೀತರ ವಸ್ತುಗಳು ವಶ!

ಶಿವಮೊಗ್ಗ, ಏ. ೫: ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ, ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ, ಸೂಕ್ತ ದಾಖಲೆಯಿಲ್ಲದೆ ವಾಹನಗಳಲ್ಲಿ ಸಾಗಾಣೆ ಮಾಡಲಾಗುತ್ತಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಅನುಮತಿಯಿಲ್ಲದೆ ಚುನಾವಣೆ ಪ್ರಚಾರ ನಡೆಸುತ್ತಿದ್ದ ವಾಹನ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ ವಿವರ ಈ ಮುಂದಿನಂತಿದೆ.
ಶಿವಮೊಗ್ಗ: ಏ. ೪ ರಂದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ೭ ಲಕ್ಷ ರೂ. ಮೌಲ್ಯದ, ೧೧೯ ಕ್ವಿಂಟಾಲ್ ತೂಕದ ೪೬೦ ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಸಾಗರ: ಏ.೩ ರಂದು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ೨.೩೦ ಲಕ್ಷ ರೂ. ಮೊತ್ತದ ಬಟ್ಟೆ-ಗೃಹೋಪಯೋಗಿ ವಸ್ತುಗಳು, ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ ೧ ಲಕ್ಷ ರೂ. ಮೌಲ್ಯದ ಕಾಫಿ-ಟೀ ಪುಡಿ, ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ ೧.೩೮ ಲಕ್ಷ ರೂ. ಮೌಲ್ಯದ ಹಾರ್ಡ್ ವೇರ್ ಪರಿಕರಗಳು, ಲಗೇಜ್ ವಾಹನದಲ್ಲಿ ಕೊಂಡೊಯ್ಯಲಾಗುತ್ತಿದ್ದ ೧.೫೦ ಲಕ್ಷ ರೂ. ಮೌಲ್ಯದ ಅಡುಗೆ ಎಣ್ಣೆ-ಜ್ಯೂಸ್ ಪ್ಯಾಕ್ ಹಾಗೂ ವಾಹನವೊಂದರಲ್ಲಿ ಸಾಗಿಸಲಾಗುತ್ತಿದ್ದ ೧೫ ಲಕ್ಷ ರೂ. ಮೌಲ್ಯದ ಬಟ್ಟೆ ಮತ್ತು ಹಾರ್ಡ್ ವೇರ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ತೀರ್ಥಹಳ್ಳಿ : ಏ. ೩ ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಯಿಲ್ಲದೆ ಸಾಗಾಣೆ ಮಾಡಲಾಗುತ್ತಿದ್ದ ೯೫,೮೯೦ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಏ.೪ ರಂದು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಇಯಲ್ಲಿ ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ ೧.೪೦ ಲಕ್ಷ ರೂ. ಮೌಲ್ಯದ ೫೦ ಗ್ಯಾಸ್ ಸ್ಟೌವ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ : ಏ. ೩ ರಂದು ಯಾವುದೇ ಅನುಮತಿಯಿಲ್ಲದೆ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನವನ್ನು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್.ಕೆ.ಜಂಕ್ಷನ್ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ವಾಹನ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು, ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.