ಗ್ಯಾಸ್ ಸಿಲಿಂಡರ್ ಸ್ಫೋಟ: 6 ಜನರಿಗೆ ಗಂಭೀರ ಗಾಯ

ಕಲಬುರಗಿ,ಸೆ.11-ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 6 ಜನರಿಗೆ ಗಂಭೀರ ಗಾಯಗಳಾದ ಘಟನೆ ನಗರದ ಚೌಡೇಶ್ವರಿ ಕಾಲೋನಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಇಂಜಿನಿಯರ್ ರಮೇಶ ಮಲ್ಲಪ್ಪ ಪ್ಯಾರಸಾಬಾದ್ (50) ಎಂಬುವವರ ಮನೆಯಲ್ಲಿಯೇ ಸಿಲಿಂಡರ್ ಸ್ಫೋಟಗೊಂಡು ರಮೇಶ ಮತ್ತವರ ಪುತ್ರಿ ಅಂಬಿಕಾ (21), ಮನೆ ಗೆಲಸದ ಶಶಿಕಲಾ, ಎದುರು ಮನೆಯ ಶಿಕ್ಷಕ ಸುರೇಶ ನಿಂಗಪ್ಪ ನಾಯಕೋಡಿ (57), ಮತ್ತ ಲಿಂಗರಾಜ ಶರಣಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ರಮೇಶ ಅವರ ಮನೆಯ ಕಿಟಕಿ, ಬಾಗಿಲು ಮತ್ತು ಪಕ್ಕದ ಮನೆಯ ಕಿಟಕಿ, ಬಾಗಿಲು ಛಿದ್ರವಿಛಿದ್ರಗೊಂಡಿವೆ. ಸ್ಫೋಟದ ಶಬ್ಧ ಕೇಳಿ ನೆರೆಮನೆಯವರು ಹೊರಗೋಡಿ ಬಂದಿದ್ದಾರೆ. ಸುದ್ದಿ ತಿಳಿದು ರಾಘವೇಂದ್ರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.