ಗ್ಯಾಸ್ ಬೆಲೆ ಏರಿಕೆಗೆ ಬಿ ಎಸ್ ಪಿ ಖಂಡನೆ

ಗುರುಮಠಕಲ್ :ಮಾ.2:ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಬಿಜೆಪಿ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಗೆ ರೂ. 50 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಗೆ 350 ಗಳನ್ನು ಏರಿಕೆ ಮಾಡಿರುವುದನ್ನು ಬಹುಜನ ಸಮಾಜ ಪಕ್ಷ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಕಿಡಿ ಕಾರಿದ್ದಾರೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನತೆಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಮತ್ತಷ್ಟು ಬರೆ ಎಳೆದಂತಾಗಿದೆ.
ತಕ್ಷಣ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ನಮ್ಮ ಪಕ್ಷ ಆಗ್ರಹಿಸುತ್ತದೆ ಎಂದಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಜನಸಾಮಾನ್ಯರ ಹಿತಕಿಂತ ಸುಲಿಗೆಯೇ ಆದ್ಯತೆ ಯಾಗಿರುವಂತೆ ಕಾಣುತ್ತಿದೆ.
ಈಗಾಗಲೇ ಅಗತ್ಯ ವಸ್ತುಗಳ ಮೇಲೆ ಶೇಕಡ 28 ರಷ್ಟು ಜಿಎಸ್ಟಿ ಹೇರಿ ಜನಸಾಮಾನ್ಯರು ಹೈರಾಣ ಆಗುವಂತೆ ಮಾಡಿದೆ.
ಒಂದೆಡೆ ಖಾಸಗಿ ಉದ್ಯಮಗಳು ಉದ್ಯೋಗ ಕಡಿತ ಮಾಡುತ್ತಿವೆ.
ಮತ್ತೊಂದು ಕಡೆ ಸರ್ಕಾರ ಖಾಲಿ ಉದ್ಯೋಗ ಭರ್ತಿ ಮಾಡುತ್ತಿಲ್ಲ.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.
ಇಂಥ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬ ಕನಿಷ್ಠ ಪ್ರಜ್ಞೆ ಸರ್ಕಾರಕ್ಕೆ ಇರಬೇಕಿತ್ತು ಎಂದು ಟೀಕಿಸಿದ್ದಾರೆ.
ಪದವೀಧರರು ಪಕೋಡ ಮಾರಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಯನ್ನು 350 ರೂಪಾಯಿ ಹೆಚ್ಚಿಸಿರುವುದು ಸರಿಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಒಂದೆಡೆ ನಿರುದ್ಯೋಗ, ಮತ್ತೊಂದೆಡೆ ಬೆಲೆ ಏರಿಕೆ ಭಾರತದ ಜನ ಸಾಮಾನ್ಯರನ್ನು ಕಂಗೆಡಿಸಿದೆ.
ಆದ್ದರಿಂದ ತಕ್ಷಣ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಾಪಸ್ ಪಡೆಯ ಬೇಕೆಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದಿದ್ದಾರೆ.