
ಚಿತ್ರದುರ್ಗ, ಮೇ.25: ಕಾಂಗ್ರೇಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರೆಂಟಿ ಕಾರ್ಡ್ ಯೋಜನೆಗಳು ಅನುಷ್ಟಾನ ಆಗುವವರೆಗೂ ಜಿಲ್ಲೆಯಲ್ಲಿ ಯಾರೂ ಕೂಡ ವಿದ್ಯುತ್ ಬಿಲ್, ಬಸ್ ಚಾರ್ಜ್ ಕೊಡಬೇಡಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದ್ದಾರೆ.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ಟಿ ಭಾಗ್ಯಗಳ ಸರ್ದಾರ ಎಂದರೆ ಸಿದ್ದರಾಮಯ್ಯ. ರಾಜ್ಯದಲ್ಲಿ ಯಾರು ಕೂಡ ವಿದ್ಯುತ್ ಬಿಲ್ ಕಟ್ಟುವ ಆಗಿಲ್ಲ. ಮಹಿಳೆಯರಿಗೆ ರಾಜ್ಯದ ಎಲ್ಲಾ ಕಡೆ ಬಸ್ ಚಾರ್ಜ್ ಉಚಿತ ಎಂದು ತಮ್ಮ ಭಾಷಣದಲ್ಲಿ ಸ್ವಷ್ಟವಾಗಿ ಹೇಳಿದ್ದಾರೆ. ಇದರ ಪ್ರಕಾರ ಜನರು ಬಹಳಷ್ಟು ನಿರಿಕ್ಷೇಯಿಂದ ಕಾಂಗ್ರೇಸ್ ಗೆ ಮತ ಹಾಕಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಆದರೂ ಕೂಡ ಗ್ಯಾರೆಂಟಿ ಕಾರ್ಡ್ ಭಾಗ್ಯಗಳನ್ನು ಯಾಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.ಕಾಂಗ್ರೇಸ್ ಜನರಿಗೆ ಹಳ್ಳ ಹಿಡಿಸುವಂತಹ ಹಾಗೂ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡಿದ್ದಾರೆ. ಭಾಷಣ ಮಾಡಿ, ಜನರಿಗೆ ಟೋಪಿ ಹಾಕುವಾಗ ಇಲ್ಲದ ಷರತ್ತುಗಳು ಈಗ ಏಕೆ ಹಾಕಿದ್ದಿರಾ ? ಅಧಿಕಾರಕ್ಕೆ ಬಂದ ಮೊದಲ ದಿನವೇ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿ ಇದೀಗ ಜನರಿಗೆ ಬೂದಿ ಎರಚುತ್ತಿದ್ದಿರಾ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಗೆದ್ದಂತಹ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಈ ಮೊದಲು ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕುಂಠಿತಗೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲು ಮಾರ್ಗ, ಮೆಡಿಕಲ್ ಕಾಲೇಜು ಹಾಗೂ ಕೇಂದ್ರೀಯ ವಿದ್ಯಾಲಯ ಕಾರ್ಯಗಳನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಚಾಲನೆ ನೀಡಿ, ಇದೀಗ ಅಂತಿಮ ಘಟ್ಟದಲ್ಲಿ ಇವೆ. ಹೊಸದಾಗಿ ಚುನಾಯಿತರಾಗಿರುವ ಶಾಸಕರು ಅವುಗಳಿಗೆ ಯಾವುದೇ ಕಾರಣಕ್ಕೂ ಅಡ್ಡಿಯಾಗದೆ ಯೋಜನೆಗಳ ಅನುಷ್ಟಾನಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಾಯಕರುಗಳು ಆತ್ಮವಲೋಕನ ನಡೆಸಿದ್ದಾರೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲು ಕೂಡ ರಾಜ್ಯ ನಾಯಕರು ಸಭೆ ನಡೆಸಿ, ಕಾರ್ಯಕರ್ತರಿಗೆ ಎದೆಗುಂದದೆ ಮನೋಬಲ ಹೆಚ್ಚಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ತಿಳಿಸಿದರು.ಕಾಂಗ್ರೇಸ್ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಜಾರಿ ಮಾಡಿರುವ ಎಲ್ಲಾ ಕಾಯ್ದೆಗಳನ್ನು ಹಿಂಪಡೆಯುತ್ತೇವೆ. ಆರ್ ಎಸ್ ಎಸ್, ಬಜರಂಗದಳ ಮೇಲೆ ಕೇಸು ದಾಖಲು ಮಾಡುತ್ತೇವೆ ಎಂದು ಹೇಳುವ ಮೂಲಕ ಬಹುಸಂಖ್ಯಾತ ಹಿಂದುಗಳ ಧಮನ ಕಾರ್ಯ ನಡೆಸಲಾಗುತ್ತಿದೆ. ಇದ್ಯಾವುದಕ್ಕು ನಾವು ಬಗ್ಗುವುದಿಲ್ಲ, ಹಿಂಜರಿಯುವುದಿಲ್ಲ ಈ ಕುರಿತು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ನರೇಂದ್ರ, ರಾಜೇಶ್, ಸಂಪತ್, ದಗ್ಗೆ ಶಿವಪ್ರಕಾಶ್ ನಾಗರಾಜ್ ಬೇದ್ರೆ ಉಪಸ್ಥಿತರಿದ್ದರು.