ಗ್ಯಾರೆಂಟಿಗೆ ಮನಸೋತ ಮತದಾರ

ಕಲಬುರಗಿ,ಡಿ.೩: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಪಕ್ಷಕ್ಕೆ ನೆರೆಯ ತೆಲಂಗಾಣದಲ್ಲಿ ಅಧಿಕಾರ ತಂದುಕೊಟ್ಟಿದೆ ಎಂದು ರಾಜ್ಯದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ಐಟಿಎಫ್ ಕಲಬುರಗಿ ಫೈನಲ್ ಪಂದ್ಯ ವೀಕ್ಷಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಗ್ಯಾರಂಟಿ ವರ್ಕೌಟ್ ಆಗಿದೆ ಎಂದರು.
ಮಧ್ಯಪ್ರದೇಶ, ರಾಜಸ್ತಾನದಲ್ಲಿ ಸ್ವಲ್ಪ ಹಿನ್ನಡೆ ಆಗಿರುವುದು ನಿಜವಾದರೂ, ಪೂರ್ಣ ಫಲಿತಾಂಶದ ಬಳಿಕ ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕುಳಿತು ಪರಾಮರ್ಶೆ ನಡೆಸಲಿದ್ದಾರೆ ಎಂದು ನುಡಿದರು.
ತೆಲಂಗಾಣದಲ್ಲಿ ಬಿಆರ್ ಎಸ್ ಸರ್ಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದಿಂದ ಹಿನ್ನಡೆ ಆಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದೆ. ಜಾತಿ ಜಾತಿಗಳ ಮಧ್ಯೆ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿಯವರು ಮಾಡಿದರೆ ನಮ್ಮದು ಜನಪರ ನಿಲುವು ಎಂದರು.
ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಬಿಜೆಪಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿತ್ತು. ಕರ್ನಾಟಕದಲ್ಲಿ ಮಾಡಿದಂತೆಯೇ ಮಧ್ಯಪ್ರದೇಶಲ್ಲಿ ಬಿಜೆಪಿ ಅವರು ಆಪರೇಷನ್ ಮಾಡಿ ಅಧಿಕಾರ ಮಾಡಿದ್ದರು. ನಮ್ಮದು ಹಾಗಲ್ಲ. ನಮ್ಮದೇನಿದ್ದರೂ ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಎಂದು ಸಮರ್ಥಿಸಿಕೊಂಡರು.

ಲೋಕ ಚುನಾವಣೆಗೆ ದಿಕ್ಸೂಚಿ ಅಲ್ಲ
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಾಖ್ಯಾನಿಸಿದರು.ರಾಜ್ಯಗಳ ಚುನಾವಣೆಯೇ ಬೇರೆ. ರಾಷ್ಟ್ರ ಚುನಾವಣೆಯೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಫಲಿತಾಂಶ ದಿಕ್ಸೂಚಿ ಎಂದು ಹೇಳಲಾಗದು ಎಂದರು.ಆಪರೇಷನ್ ಕಮಲ ಭಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಮಗೆ ಯಾವುದೇ ಆಪರೇಷನ್ ಭಯ ಇಲ್ಲ. ಆದರೆ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.ಬಿಜೆಪಿಯವರು ತೋಳ್ಬಲ, ಹಣ ಬಲ, ಸಿಬಿಐ, ಇ.ಡಿ ಬಳಕೆ ಮಾಡುತ್ತಾರೆ, ಹೀಗಾಗಿ ನಮ್ಮ ಶಾಸಕರನ್ನು ನಾವು ಸೇಫ್ ಆಗಿ ಇಟ್ಟುಕೊಳ್ಳಬೇಕಿದೆ ಎಂದು ನುಡಿದರು.