ಗ್ಯಾರಂಟಿ’ ಹಣ ಸಾಲಕ್ಕೆ ವಜಾ ಮಾಡದಂತೆ ಒತ್ತಾಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೨: ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳಿಗೆ ನಗದು ವರ್ಗಾವಣೆ ಸೌಲಭ್ಯ (ಸಿಬಿಟಿ)ಯ ಹಾಕುವ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ  ಒತ್ತಾಯಿಸಿದರು.ವಿಧಾನಸಭೆ ಕಲಾಪದಲ್ಲಿ ಬಜೆಟ್  ಚರ್ಚೆಯಲ್ಲಿ ಮಾತನಾಡಿದ ಅವರು,  ರೈತ ಮಹಿಳೆಯರು ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ 25 ಸಾವಿರ ರೂ. ನಿಂದ 1 ಲಕ್ಷದವರೆಗೂ ಸಾಲ ಮಾಡಿಕೊಂಡಿರುತ್ತಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದ್ದಂತೆ ಬ್ಯಾಂಕ್‌ನವರು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಾರೆ. ಇದರಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿ  ಮಹಿಳೆಯರಿಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.ನೀವು ಈ ವಿಷಯವನ್ನು ಸದನದಲ್ಲಿ ಉತ್ತಮವಾಗಿ ಗಮನ ಸೆಳೆದಿದ್ದೀರಾ. ಈ ರೀತಿ ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸಂಬಂಧಪಟ್ಟ ಸಚಿವರಿಗೆ  ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸೂಚನೆ ನೀಡಿದರು.ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದರಿಂದ ಯುವಕರು, ವಿದ್ಯಾರ್ಥಿಗಳು ಮದ್ಯ ವ್ಯಸ್ಯನಿಗಳಾಗಿದ್ದಾರೆ. ಇದರಿಂದ ಎಷ್ಟೋ ಕುಟುಂಬಗಳು ಮನೆ, ಮಠ ಮಾರಿ ಬೀದಿ ಪಾಲಾಗಿವೆ. ಅಲ್ಲದೇ ಗಂಡ ಹೆಂಡತಿ ನಡುವೆ ಜಗಳ ನಡೆದು ಎಷ್ಟೋ ಕುಟುಂಬಗಳು ಮುರಿದು ಹೋಗಿವೆ. ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದರೆ ಅಧಿಕಾರಿಗಳು  ಪ್ರತಿ ತಿಂಗಳು ಅಂಗಡಿಯವರು ಕೊಡುವ ಲಂಚದಿಂದ ಕ್ರಮ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಸರ್ಕಾರ ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.