ಗ್ಯಾರಂಟಿ ಸಾಕು,ಶಾಶ್ವತ ಪರಿಹಾರ ದೊರಕಿಸಿ

ಕಲಬುರ್ಗಿ:ಆ.12: ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಅವಕಾಶ ವಂಚಿತರಿಗೆ ತಾತ್ಕಾಲಿಕ ಪರಿಹಾರವಾಗಿದ್ದು , ಭೂಮಿ ನೀಡುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಜಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕ ಪರಿಹಾರದ ಗ್ಯಾರಂಟಿ ಸಾಕು ಮಾಡಿ,ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ, ಆರ್ಥಿಕ ಶೈಕ್ಷಣಿಕ,ಸಾಂಸ್ಕøತಿಕ,ರಾಜಕೀಯ ಸಮಾನತೆ ಕಲ್ಪಿಸಬೇಕು ಎಂದರು.ಎಚ್ ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯನ್ನು ಸಂಪುಟ ಮತ್ತು ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕು. ಜನಸಂಖ್ಯೆಯ ಅನುಗುಣವಾಗಿ ಅನುದಾನ ಮೀಸಲಿರುವ ಪರಿಶಿಷ್ಟ ಜಾತಿ ,ಪಂಗಡಗಳ ಉಪ ಯೋಜನಾ ಕಾಯ್ದೆಯಲ್ಲಿ ಮೀಸಲು ಅನುದಾನವನ್ನು ಹಿಂಪಡೆದುಕೊಳ್ಳುವ ಸರ್ಕಾರದ ಅವಕಾಶವನ್ನು ಕೈ ಬಿಡುವ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕೆಂದು ಅವರು ಒತ್ತಾಯಿಸಿದರು.
ಭೂಮಿ ಪರಭಾರೆ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿ ಮಾಡಿ,ಭೂ ರಹಿತ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ನೀಡಿ ಭೂಮಿ ಹಂಚಿಕೆ ಮಾಡಿ ಹಕ್ಕು ಖಾತ್ರಿ ಪಡಿಸುವ ಕರ್ನಾಟಕ ಸಮಗ್ರ ಭೂ ಕಾಯ್ದೆಯನ್ನು ಜಾರಿಗೊಳಿಸಬೇಕು.
ಅನಾಗರಿಕ ಅಸ್ಪಶ್ಯತೆ ಆಚರಣೆ ಕೊನೆಗಾಣಿಸಲು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಪ್ರತಿನಿಧಿ ಒಳಗೊಂಡ ಜಾಗತಿಕ ಸಮಾವೇಶ ನಡೆಸಬೇಕು ಎಂದು ಅವರ ಆಗ್ರಹಿಸಿದರು.