ಗ್ಯಾರಂಟಿ ಸರ್ಕಾರದಲ್ಲಿ ವಿಜಯನಗರಕ್ಕಿಲ್ಲಾ ಮಂತ್ರಿಬಾಗ್ಯ ಗ್ಯಾರಂಟಿ ಹಿನ್ನಡೆಯಾಗಲಿದೆಯಾ ವಿಜಯನಗರದ ಅಭಿವೃದ್ಧಿ!


(ಅನಂತ ಜೋಶಿ)
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮೇ28: ಬಹುನಿರೀಕ್ಷಿತ ಗ್ಯಾರಂಟಿಗಳ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನದ ಭಾಗ್ಯನೀಡದೆ, ಆನಂದ್‍ಸಿಂಗ್ ಮೇಲಿನ ಸಿಟ್ಟನ್ನು ತಿರಿಸಿಕೊಂಡಿದ್ದು ಅಲ್ಲದೆ ಜಿಲ್ಲಾಭಿವೃದ್ಧಿಗೂ ಗ್ಯಾರಂಟಿ ಹಿನ್ನಡೆಯನ್ನು ಮಾಡಲಿದೆಯಾ ಎಂಬ ಚೆರ್ಚೆಗಳು ಇದೀಗ ಕ್ಷೇತ್ರದಾದ್ಯಂತ ಹರಿದಾಡಲಾರಂಭಿಸಿದೆ. 
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟವೇನು ರಚನೆ ಮಾಡಿತಾದರೂ ನೂತನ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಅಭಿವೃದ್ಧಿಗೆ ಸಣ್ಣ ಹಿನ್ನೆಡೆಯಾಗಲು ಕಾರಣವಾಗಲಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಬಿಸಿ ಬಿಸಿ ಚೆರ್ಚೆಗೆ ಕಾರಣವಾಗಿದೆ.
ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ, ವಿಜಯನಗರ ಕ್ಷೇತ್ರದಿಂದ ಎಚ್.ಆರ್. ಗವಿಯಪ್ಪ ಹಾಗೂ ಕೂಡ್ಲಿಗಿ ಕ್ಷೇತ್ರದಿಂದ ಡಾ.ಎನ್.ಟಿ.ಶ್ರೀನಿವಾಸ ಗೆಲವು ಸಾಧಿಸಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲವು ಕಂಡಿದ್ದು, ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿ ಎಂ.ಪಿ.ಲತಾ ಅವರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದು ಹಗರಿಬೊಮ್ಮನಹಳ್ಳಿ ಜೆಡಿಎಸ್ ಪಕ್ಷದ ನೇಮರಾಜ ನಾಯ್ಕ್, ಹೂವಿನ ಹಡಗಲಿ ಬಿಜೆಪಿ ಪಕ್ಷದ ಕೃಷ್ಣ ನಾಯಕ ಗೆಲವು ಕಂಡಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಕೊಂಡಿದ್ದ ಕಾಂಗ್ರೆಸ್ ಇಬ್ಬರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಿ ಜಿಲ್ಲೆಗೆ ಅವಕಾಶ ನೀಡಬಹುದಾಗಿತು. ಇದು ಕಾಂಗ್ರೆಸ್ ಪಕ್ಷದ ಬೆಳವಣಿಗೆ ಹಾಗೂ ಜಿಲ್ಲಾ ಬೆಳವಣಿಗೆಗಳಿಗೆ ಸಹಕಾರಿಯಾಗುತ್ತಿತು ಎನ್ನಲಾಗಿದೆ. .
ನೂತನ ಜಿಲ್ಲೆಗೆ ಬೇಕಿತ್ತು ಸಚಿವ ಸ್ಥಾನ:
ನೂತನ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ವಿಜಯನಗರಕ್ಕೆ ಸಚಿವ ಸ್ಥಾನ ನೀಡಬೇಕಿತ್ತು. ಅದರಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ ಸ್ಥಾನ ನೀಡಬಹುದು ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿತ್ತು. ಸಚಿವ ಸ್ಥಾನಕ್ಕಾಗಿ ಶಾಸಕ ಎಚ್.ಆರ್.ಗವಿಯಪ್ಪ ಕಸರತ್ತು ನಡೆಸಿದ್ದರು. ಮಧು ಬಂಗಾರಪ್ಪ, ಗವಿಯಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಈ ಮೂವರು ಈಡಿಗ ಸಮಾಜದ ಶಾಸಕರಾಗಿದ್ದಾರೆ. ಅದರಲ್ಲಿ ಮಧು ಬಂಗಾರಕ್ಕೆ ಸಚಿವ ಸ್ಥಾನ ನೀಡಿರುವುದರಿಂದ ಗವಿಯಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.
ವಿಜಯನಗರ ಜಿಲ್ಲೆಯಾದ ಬಳಿಕ ಜಿಲ್ಲಾ ಮಟ್ಟದ ಕಚೇರಿಗಳ ನಿರ್ಮಾಣ ಕಾರ್ಯ ವೇಗದಿಂದ ಸಾಗಿದೆ. ಮೆಡಿಕಲ್ ಕಾಲೇಜ್, ಜಿಲ್ಲಾಸ್ಪತ್ರೆ, ಎಂಜನಿಯರಿಂಗ್ ಸರ್ಕಾರಿ ಕಾಲೇಜ್, ಮಹಿಳಾ ಪೊಲೀಸ್ ಠಾಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯವೂ ನಡೆಯಬೇಕಿದೆ. ಮೂಲ ಸ್ಥಾನದಲ್ಲಿರುವ ಸಚಿವ ಸ್ಥಾನ ನೀಡದೇ ಹೊರಗಿನ ಶಾಸಕರಿಗೆ ಉಸ್ತುವಾರಿ ನೀಡಿದರೆ, ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಚೆರ್ಚೆಯಾಗುತ್ತಿದೆ.
ಬಿಜೆಪಿ ಸರ್ಕಾರ ಅಧಿಕಾರ ಅವಧಿಯಲ್ಲಿ ಮಾಜಿ ಸಚಿವ ಆನಂದ ಸಿಂಗ್ ನೂತನ ಜಿಲ್ಲೆಯ ಅಭಿವೃದ್ಧಿಗೆ ಕೋಟಿ, ಕೋಟಿ, ರೂ ಹಣವನ್ನು ತಂದಿದ್ದರು. ಸಾಕಷ್ಟು ಡಿಎಂಎಫ್ ಅನುದಾನವೂ ಇದೆ ಆದರೆ, ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಈ ಭಾಗದ ಅಭಿವೃದ್ಧಿ ಗೌಣವಾಗಲಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಕಾಂಗ್ರೆಸ್ ಸರ್ಕಾರದಲ್ಲಿ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ಅಂತು, ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬಂತಾಗಿ ಜಿಲ್ಲಾರಚನೆಯಲ್ಲಿ ಹಿನ್ನೆಡೆ ಕಾಣುವಂತಾಗಬಹುದು.
ಮತ್ತೊಂದಡೆ ಹಿಂದಿನ ಕಾಂಗ್ರೆಸ್ ಸರ್ಕಾರ ಬೀಳಲು ಕಾರಣವಾಗಿದ್ದ ಮಾಜಿ ಸಚಿವ ಆನಂದ್‍ಸಿಂಗ್ ಕಾಂಗ್ರೆಸ್ ಬಿಡಲು ಜಿಲ್ಲಾರಚನೆಯಾಗಬೇಕು ಎಂಬ ಕಾರಣ ನೀಡಿದ್ದು ಸಹ ಸಿದ್ಧರಾಮಯ್ಯ ಮುನಿಸಿಗೆ ಕಾರಣವಾಗಿದ್ದ ಈ ಕಾರಣಕ್ಕಾಗಿಯೇ  ಸ್ವಲ್ಪ ಹಿನ್ನಡೆಯಾಗಬೇಕು ಎಂದು ವಿಜಯನಗರಕ್ಕೆ ಸಚಿವ ಸ್ಥಾನವನ್ನು ನೀಡಿಲ್ಲಾ ಎಂಬ ಮಾತುಗಳು ಬಿಸಿ ಚೆರ್ಚೆಯಾಗಲು ಕಾರಣವಾಗಿದೆ.