ಗ್ಯಾರಂಟಿ ಯೋಜನೆಗೆ ಪಜಾ,ಪಪಂ ನಿಧಿ ಬಳಕೆ:ಸಚಿವ ಖೂಬಾ ಖಂಡನೆ

ಬೀದರ,ಆ 4: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾದ ನಿಧಿಯಿಂದ 11 ಸಾವಿರ ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಾಗಿ ಬಳಸಿಕೊಳ್ಳುತ್ತಿರುವ ಕ್ರಮವನ್ನು
ಕೇಂದ್ರ ಸಚಿವ ಭಗವಂತ ಖೂಬಾ ಖಂಡಿಸಿ, ಕಾಂಗ್ರೆಸ್ ಪಕ್ಷ ತನ್ನ
ದುರಾಸೆಗಾಗಿ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ
ಅಭಿವೃದ್ದಿಯನ್ನು ಬಲಿ ಕೊಡುತ್ತಿದೆ ಎಂದು ಟೀಕಿಸಿದ್ದಾರೆ.
ತನ್ನ ರಾಜಕೀಯ ಲಾಭಕ್ಕಾಗಿ ಹಾಲು, ಆಸ್ತಿ ನೋಂದಣಿ ಮತ್ತು
ಇತರೆ ಹಲವು ತೆರಿಗೆಗಳ ಸುಂಕವನ್ನು ಹೆಚ್ಚಿಸಿದ ನಂತರ
ಸಿದ್ದರಾಮಯ್ಯನವರ ಸರ್ಕಾರ ಈಗ ಪರಿಶಿಷ್ಟ ಜಾತಿ,
ಪಂಗಡದವರ ಹೊಟ್ಟೆ ಮೇಲೆ ಹೊಡೆಯುತ್ತಿದೆ, ಇದು ರಾಜ್ಯದ
ದಲಿತರಿಗೆ, ಬಡವರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು
ಕಿಡಿಕಾರಿದ್ದಾರೆ.
ಅವೈಜ್ಞಾನಿಕ ಹಾಗೂ ಆರ್ಥಿಕ ಸ್ಥಿತಿಗಳ ಅರಿವಿಲ್ಲದೆ ಇವರು
ಘೋಷಣೆ ಮಾಡಿರುವ ಗ್ಯಾರಂಟಿಗಳಿಂದ ರಾಜ್ಯದ ಎಲ್ಲಾ ಜನರಿಗೆ
ಅನಾನುಕೂಲ ಉಂಟಾಗುತ್ತಿದೆ. ಒಂದೆಡೆ ಲಾಭ ಕೊಟ್ಟಂತೆ ಮಾಡಿ,
ಇನ್ನೊಂದೆಡೆ ಬೆಲೆ ಹೆಚ್ಚಿಸಿ, ಜನರಿಂದ ದುಡ್ಡು ಕಸಿದುಕೊಳ್ಳುವ
ಕೆಲಸ ಮಾಡುತ್ತಿದೆ ಸಿದ್ದರಾಮಯ್ಯನವರ ಸರ್ಕಾರ ಎಂದಿದ್ದಾರೆ.
ಸರ್ಕಾರ ಬಂದು ಕೇವಲ ಎರಡ್ಮೂರು ತಿಂಗಳೊಳಗೆ, ಸ್ವತಃ
ಅವರ ಪಕ್ಷದ ಶಾಸಕರುಗಳೇ, ಸರ್ಕಾರದ ಕಾರ್ಯವೈಖರಿ ಬಗ್ಗೆ
ಅಸಮಾಧಾನ ಹೊರಹಾಕುತ್ತಿದ್ದಾರೆ, ಭ್ರಷ್ಟಚಾರ
ತಾಂಡವವಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ, ರಾಜ್ಯದ ಜನರು ಸಹ
ಇಂತವರ ಕೈಗೆ ಯಾಕಾದರೂ ಅಧಿಕಾರ ನೀಡಿದ್ದೇವೋ ಎಂದು
ಅಸಮಾಧಾನದಿಂದ ಇದ್ದಾರೆ.ಇವರ ಆಡಳಿತದಲ್ಲಿ ರಾಜ್ಯದ
ಯಾರೊಬ್ಬರು ಸಹ ನೆಮ್ಮದಿಯಿಂದ ಬದುಕುತ್ತಿಲ್ಲವೆಂದು
ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ.
ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಘೋಷಿಸುವ
ನೆಪದಲ್ಲಿ ಭ್ರಷ್ಟಾಚಾರ ಮಾಡುವುದು, ಯಾವೂದೇ ಒಂದು
ವರ್ಗಕ್ಕೆ ಅನ್ಯಾಯ ಮಾಡಲು ಮುಂದಾದಲ್ಲಿ, ಸರ್ಕಾರದ ವಿರುದ್ಧ
ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಕೊಟ್ಟ
ಮಾತಿನಂತೆ ಯಾವುದೇ ಷರತ್ತುಗಳು ವಿಧಿಸದೆ, ಎಲ್ಲಾ
ಗ್ಯಾರಂಟಿಗಳು ಜಾರಿಗೆ ತರುವುದರ ಜೊತೆಗೆ ರಾಜ್ಯದ
ಸರ್ವತೋಮುಖ ಅಭಿವೃದ್ದಿಗೆ ಬದ್ಧರಾಗಬೇಕು ಎಂದು ಸರ್ಕಾರಕ್ಕೆ
ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.