ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಸಿಎಂ

ಬೆಂಗಳೂರು, ಏ. ೧೯- ಗ್ಯಾರಂಟಿ ಯೋಜನೆಗಳು ಬಹಳ ಕಾಲ ಇರಲ್ಲ ಎಂದು ಬಿಜೆಪಿ-ಜೆಡಿಎಸ್ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಇದು ಸರಿಯಲ್ಲ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ವಿವಿಧ ಮುಖಂಡರುಗಳು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಬಡವರಿಗೆ ಆರ್ಥಿಕ ಶಕ್ತಿ ತುಂಬಿವೆ. ಬಿಜೆಪಿ- ಜೆಡಿಎಸ್‌ನವರು ಗ್ಯಾರಂಟಿಗಳ ಬಗ್ಗೆ ಬಾಯಿಗೆ ಬಂದ ಹಾಗೆ ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಮುಂದುವರೆಯುತ್ತವೆ ಎಂದರು.
ಈ ಹಿಂದೆ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಎಂದು ಬಿಜೆಪಿ ಜೆಡಿಎಸ್ ನಾಯಕರು ಹೇಳಿದ್ದರು. ಗ್ಯಾರಂಟಿ ಯೋಜನೆಗಳಿಗೆ ಮುಂದಿನ ವರ್ಷವೂ ಅನುದಾನ ಇಟ್ಟದ್ದೇವೆ. ಗ್ಯಾರಂಟಿ ನಿಲ್ಲಲ್ಲ. ಭಾವನಾತ್ಮಕ ವಿಚಾರದಿಂದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಜೆಡಿಎಸ್ ನಾಯಕರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಏನೂ ಸಾಧನೆ ಮಾಡಿಲ್ಲ. ಕರ್ನಾಟಕಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿಗಳು, ತೆರಿಗೆ ಹಂಚಿಕೆಯಲ್ಲಿ, ಬರ ಪರಿಹಾರ ಬಿಡುಗಡೆಯಲ್ಲಿ ಎಲ್ಲದರಲ್ಲೂ ಕೇಂದ್ರದಿಂದ ಅನ್ಯಾಯವಾಗಿದೆ ಎಂದರು.
ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್‌ಗೆ ನಿರೀಕ್ಷೆಗಿಂತ ಹೆಚ್ಚು ಸ್ಪಂದನೆ ಸಿಗುತ್ತಿದೆ. ೨೦ ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.