
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.05:- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟಿರುವ ಎಸ್‍ಇಪಿ ಮತ್ತು ಟಿಎಸ್‍ಪಿ ಅನುದಾನವನ್ನು 5 ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಮಾಜಿ ಶಾಸಕರಾದ ಎನ್. ಮಹೇಶ್, ಸಿ.ಎಸ್. ನಿರಂಜನ್‍ಕುಮಾರ್ ನೇತೃತ್ವದಲ್ಲಿ ಮೆರವಣಿಗೆ ಹೊರಟರು.
ಭುವನೇಶ್ವರ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ, ನಂತರ ಬಿ. ರಾಚಯ್ಯ ಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತಲುಪಿದರು. ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಎಸ್‍ಸಿ, ಎಸ್‍ಟಿ ಶಾಸಕರ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾದ ದಲಿತ ವಿರೋಧಿಯಾಗಿದ್ದಾರೆ. ಎಸ್‍ಸಿ ಹಾಗೂ ಎಸ್‍ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಈ ಅನುದಾನವನ್ನು ಬಳಸದೇ ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಮುಂದಾಗಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ನಿಜವಾದ ದಲಿತ ಹಾಗೂ ಅಂಬೇಡ್ಕರ್ ವಿರೋಧಿ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ಸಮುದಾಯದ ಪ್ರಬುದ್ದರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಳೆದ 60 ವರ್ಷಗಳಿಂದಲೂ ದಲಿತರ ಮತಗಳನ್ನು ಓಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರ ಬಂತು ಆ ಸಮುದಾಯಗಳನ್ನು ತುಳಿಯುತ್ತಾಲೇ ಬಂದಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇದರ ವಿರುದ್ದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್ ಮಾಡಿರುವ ಅಪಮಾನ ಹಾಗೂ ದಲಿತರಿಗೆ ಮಾಡಿರುವ ಅನ್ಯಾಯ ವಿರುದ್ದ ಜನ ಜಾಗೃತಿ ಮೂಡಿಸಲಾಗುತ್ತದೆ. ಬಿಜೆಪಿ ಈ ವಿಚಾರವನ್ನು ಸದನದ ಹೊರಗೆ ಹಾಗೂ ಒಳಗೂ ಪ್ರತಿಭಟಿಸುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಸಿ.ಎಸ್. ನಿರಂಜನ್‍ಕುಮಾರ್ ಮಾತನಾಡಿ, ಬಿಜೆಪಿ ಅವಧಿಯಲ್ಲಿಯೇ ಹೆಚ್ಚು ಅನುದಾನವನ್ನು ದಲಿತ ಸಮುದಾಯಗಳ ಅಭಿವೃದ್ದಿಗೆ ನೀಡಿದೆ. ಎಸ್‍ಇಪಿ ಮತ್ತು ಟಿಎಸ್‍ಪಿ ಯೋಜನೆಯಲ್ಲಿ ಸಾವಿರಾರು ಕೋಟಿ ರೂ.ಗಳನ್ನು ನೀಡಿ, ದಲಿತ ವರ್ಗದವರು ವಾಸಿಸುವ ಬೀದಿಗಳಲ್ಲಿ ಸಿಮೆಂಟ್ ರಸ್ತೆ ಚರಂಡಿಯನ್ನು ನಿರ್ಮಾಣ ಮಾಡಿ, ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದೆ. ಕಾಂಗ್ರೆಸ್ ಈ ಎಲ್ಲಾ ಅನುದಾನಗಳಿಗೆ ತಿಲಾಂಜಲಿ ನೀಡುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರು ಮುಖ್ಯಮಂತ್ರಿಗಳನ್ನು ಓಲೈಸಿಕೊಳ್ಳುವ ಸಲುವಾಗಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. 11 ಸಾವಿರ ಕೋಟಿ ರೂ.ಗಳನ್ನು ದಲಿತ ಸಮದಾಯದ ಅಭಿವೃದ್ದಿಗೆ ಬಳಕೆ ಮಾಡದೇ ಐದು ಗ್ಯಾರಂಟಿಗಳಿಗೆ ನೀಡುತ್ತಿವೆ ಎಂದು ಹೇಳಿರುವುದು ದಲಿತ ಸಮುಧಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಕೂಡಲೇ ಬಹಿರಂಗ ಕ್ಷಮೆ ಯಾಚನೆ ಮಾಡಬೇಕೆಂದು ಒತ್ತಾಯಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಮಹೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ. ಶಿವರಾಂ, ಮುಖಂಡರಾದ ವೆಂಕಟರಮಣಸ್ವಾಮಿ ಪಾಪು, ಎಂ. ರಾಮಚಂದ್ರ, ನಿಜಗುಣರಾಜು, ಜಿ. ನಾಗಶ್ರೀ ಪ್ರತಾಪ್, ನಿಶಾಂತ್, ಮಾಜಿ ನಗರಸಭಾ ಅಧ್ಯಕ್ಷರಾದ ಸುರೇಶ್ ನಾಯಕ, ಮಹದೇವನಾಯಕ, ಚುಡಾ ಮಾಜಿ ಅಧ್ಯಕ್ಷರಾದ ಎಸ್. ಬಾಲಸುಬ್ರಮಣ್ಯ, ಆರ್. ಸುಂದರ್, ಕುಲಗಾಣ ಶಾಂತಮೂರ್ತಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್, ಜಿಲ್ಲಾ ಕಾರ್ಯದರ್ಶಿ ಪದ್ಮ, ಸರಸ್ವತಿ, ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಟಗರಪುರ ರೇವಣ್ಣ, ಜಿಲ್ಲಾ ಮೋರ್ಚಾ ಕಾರ್ಯದರ್ಶಿ ಕಬ್ಬಹಳ್ಳಿ ರೇವಣ್ಣ, ಗ್ರಾಮಾಂತರ ಮಂಡಲದ ಅಧ್ಯಕ್ಷ ಮುತ್ತಿಗೆ ಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ವನಾಜಾಕ್ಷಿ, ದಾಕ್ಷಾಯಿಣಿ, ಗುಂಡ್ಲುಪೇಟೆ ಗೀತಾ, ಹೊಂಗನೂರು ಮಹದೇವಸ್ವಾಮಿ, ವೇಣುಗೋಪಾಲ್, ಪಣ್ಯದಹುಂಡಿ ಸತೀಶ ಇತರರು ಇದ್ದರು.