ಬ್ಯಾಡಗಿ,ಜೂ.4: ವಿರೋಧ ಪಕ್ಷದ ಟೀಕೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದಾಗಿ ಘೋಷಿಸಿದ ಸಂದರ್ಭದಲ್ಲಿ ವಿರೋಧ ಪಕ್ಷದವರು ಅದನ್ನು ಬಿಟ್ಟಿಭಾಗ್ಯ, ಗಳಗಂಟಿ ಎಂದು ಲೇವಡಿ ಮಾಡಿ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಕಾಂಗ್ರೆಸ್ ಪಕ್ಷಕ್ಕೆ ವಾರಂಟಿ ಇಲ್ಲ ಎಂದು ಹಾಸ್ಯಾಸ್ಪದವಾಗಿ ಮಾತನಾಡಿದ್ದರು. ಆದರೆ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಗ್ಯಾರಂಟೀ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ವಿರೋಧ ಪಕ್ಷದವರಿಗೆ ಚಾಟಿ ಬೀಸಿದ್ದಾರೆ ಎಂದು ತಿಳಿಸಿದರಲ್ಲದೇ, ಇದೇ ಜೂನ್ 11ರಂದು ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಪ್ರಾರಂಭವಾಗಲಿದ್ದು, ತಾವು ಸಹ ಅಂದು ಬ್ಯಾಡಗಿ ಬಸ್ ನಿಲ್ದಾಣದಲ್ಲಿ ಅದಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬಿಟ್ಟಿಭಾಗ್ಯ ಎಂದು ಲೇವಡಿ ಮಾಡಿದ್ದ ಬಿಜೆಪಿಯನ್ನು ರಾಜ್ಯದ ಮತದಾರರು ಸೋಲಿಸುವ ಮೂಲಕ ಮನೆಗೆ ಕಳಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡಿ ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಪಕ್ಷದ ಮೇಲೆ ರಾಜ್ಯದ ಜನರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಚ್ಯುತಿ ಬರದಂತೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜನರ ಆಶೋತ್ತರಗಳಿಗೆ ಅನುಗುಣವಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಮುಖಂಡರಾದ ಬೀರಪ್ಪ ಬಣಕಾರ, ಚನಬಸಪ್ಪ ಹುಲ್ಲತ್ತಿ, ಖಾದರಸಾಬ ದೊಡ್ಡಮನಿ, ಡಿ.ಎಚ್.ಬುಡ್ಡನಗೌಡ್ರ, ದುರ್ಗೇಶ ಗೋಣೆಮ್ಮನವರ, ಶ್ರೀನಿವಾಸ ಕುರುಕುಂದಿ, ಪ್ರಕಾಶ ಲಮಾಣಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.