ಗ್ಯಾರಂಟಿ ನುಡಿದಂತೆ ನಡೆದಿಲ್ಲ ಕೈವಿರುದ್ಧ ಎಚ್‌ಡಿಗೆ ವಾಗ್ದಾಳಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೨:ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ್ದ ೫ ಗ್ಯಾರಂಟಿಗಳನ್ನು ಜಾರಿಗೊಳಿಸುವಲ್ಲಿ ನುಡಿದಂತೆ ನಡೆದಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಪ್ರಸ್ತಾಪದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಜನರ ಏಳಿಗೆಗಾಗಿ ತರುವ ಗ್ಯಾರಂಟಿಗಳ ಅನುಷ್ಠಾನಕ್ಕೆ ನಮ್ಮ ತಕರಾರಿಲ್ಲ, ಆದರೆ, ಅವುಗಳನ್ನು ಜಾರಿಗೊಳಿಸುವಲ್ಲಿ ಸಂಪೂರ್ಣವಾಗಿ ನುಡಿದಂತೆ ನಡೆದಿಲ್ಲ ಎಂದು ಆರೋಪಿಸಿದರು..
ಗ್ಯಾರಂಟಿಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ,ಆ ಬಗ್ಗೆ ಚರ್ಚಿಸುವುದಿಲ್ಲ. ಆದರೆ, ಗ್ಯಾರಂಟಿಗಳ ಜಾರಿ ವಿಷಯದಲ್ಲಿ ನುಡಿದಂತೆ ನಡೆಯಲು ಪ್ರಯತ್ನ ನಡೆಸಿದೆಯಾದರೂ ಸಂಪೂರ್ಣ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.
ಕಳೆದ ೨೦೧೮ರಲ್ಲಿ ರಾಜ್ಯದ ಜನತೆಯೂ ಹಸಿವಿನ ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಿದೆ ಎಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದರು. ಆದರೆ, ೫ ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದು ೧೦ ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಜಾರಿಗೆ ತರಲಾಗಿದೆ. ಕೇಂದ್ರದಿಂದ ೫ ಕೆಜಿ ಅಕ್ಕಿಯ ಜತೆಗೆ ರಾಜ್ಯಸರ್ಕಾರ ೫ ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ. ಅದರ ಸದುಪಯೋಗ ಸಾಧ್ಯವೇ ಎಂದು ಪ್ರಶ್ನಿಸಿದರು.
ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿ ನಂತರ ವಾರ್ಷಿಕ ಸರಾಸರಿ ಆಧರಿಸಿ ಜಾರಿ ಮಾಡಲಾಗಿದೆ ಎಂದು ಹೇಳಿರುವುದು ಸರಿಯೇ ಎಂದು ಪ್ರಶ್ನಿಸಿದರು.ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ನಿರುದ್ಯೋಗಿ ಪದವೀಧರರಿಗೆ ೩ ಸಾವಿರ ರೂ.ಗಳ ಹಣ ನೀಡುವುದಾಗಿ ಹೇಳಿ ಪ್ರಸಕ್ತ ೨೦೨೨-೨೩ನೇ ಸಾಲಿಗೆ ಸೀಮಿತಗೊಳಿಸುವುದು ಸರಿಯೇ ಎಂದು ತರಾಟೆಗೆ ತೆಗೆದುಕೊಂಡರು.ದೇಶದಲ್ಲಿ ಬಡತನ ಎನ್ನುವುದು ಸ್ಬಾತಂತ್ರ್ಯ ಬಂದಾಗಿನಿಂದಲೂ ಇದೆ, ಹಲವು ಸರ್ಕಾರಗಳು ಬಡತನ ಹೋಗಲಾಡಿಸಲು ಗಮನ ಹರಿಸಿವೆ. ಆದರೂ ಬಡತನ ಮುಂದುವರೆದಿರುವುದು ವಿಶ್ಲೇಷಿಸಬೇಕಾದ ಸಂಗತಿ ಎಂದು ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ೧೭೦ ರೂ.ಗಳನ್ನು ನೀಡುವುದು ಸರಿ, ಅದು ಯಾರ ಬ್ಯಾಂಕ್ ಖಾತೆಗೆ ಹೋಗಲಿದೆ. ಅದರ ಸದುಪಯೋಗ ಎಷ್ಟರ ಮಟ್ಟಿಗೆ ಆಗಲಿದೆ ಎಂಬುದರ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಎಂದು ಟೀಕಿಸಿದರು.