ಗ್ಯಾರಂಟಿ ಚರ್ಚೆಗೆ ಖಾದರ್ ಅವಕಾಶ

ಬೆಂಗಳೂರು, ಜು.೫:ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಶಾಸಕರು ಮಂಡಿಸಿದ ನಿಲುವಳಿಯನ್ನು ನಿಯಮ-೬೯ರಡಿ ಚರ್ಚೆಗೆ ಸಭಾಧ್ಯಕ್ಷ ಖಾದರ್ ಅವರು ಅವಕಾಶ ನೀಡಿದರು.
ಗ್ಯಾರಂಟಿಗಳ ಬಗ್ಗೆ ನಿಲುವಳಿ ಮಂಡಿಸಿದ ಬಿಜೆಪಿ ಶಾಸಕ ಆರ್. ಅಶೋಕ್, ಗ್ಯಾರಂಟಿಯ ಆಮಿಷವನ್ನು ಜನರಿಗೆವೊಡ್ಡಿ, ಅಧಿಕಾರಕ್ಕೆ ಬಂದಿರುವ ರಾಜ್ಯಸರ್ಕಾರದ ವಿರುದ್ಧ ನಿಯಮ-೬೦ರಡಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ವಿಧಾನಸಭಾಧ್ಯಕ್ಷ ಖಾದರ್ ಅವರು ನಿಯಮ-೬೦ರಡಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಅದನ್ನು ಮಾರ್ಪಡಿಸಿ ನಿಯಮ-೬೯ರಡಿ ಚರ್ಚಿಸಲು ಅವಕಾಶ ನೀಡುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ನಿಲುವಳಿ ಮಂಡಿಸಿದ ಅಶೋಕ್, ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಜನರಿಗೆ ಮೋಸವಾಗಿದೆ. ಬಣ್ಣ ಬಣ್ಣದ ಜಾಹೀರಾತುಗಳ ಮೂಲಕ ಗ್ಯಾರಂಟಿಗಳನ್ನು ನೀಡಿ ಈಗ ಷರತ್ತಿಗಳನ್ನು ವಿಧಿಸುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದರು.
ಶಕ್ತಿ ಯೋಜನೆಯು ಗೊಂದಲದ ಗೂಡಾಗಿದ್ದರೆ, ಗೃಹಲಕ್ಷ್ಮಿ ಯೋಜನೆಯಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಯುವನಿಧಿಯಿಂದ ಯುವಕರಲ್ಲಿ ಅಸಮಾಧಾನ-ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಹರಿಹಾಯ್ದರು.