ಗ್ಯಾರಂಟಿ ಆಯವ್ಯಯದಲ್ಲಿ ಸ್ಲಂ ನಿವಾಸಿಗಳಿಗೆ ನಿರಾಸೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಫೆ.೧೮: ೨೦೨೪-೨೫ನೇ ಸಾಲಿನ ಗ್ಯಾರೆಂಟಿ ಬಜೆಟಿನಲ್ಲಿ ಸ್ಲಂ ನಿವಾಸಿಗಳ ಪ್ರಮುಖ ಬೇಡಿಕೆಗಳು ಈಡೆರದ ಕಾರಣ ಸ್ಲಂ ಜನರ ಬೇಡಿಕೆಗಳನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಮುಂಬರುವ ಪೂರಕ ಆಯವ್ಯಯದಲ್ಲಿ ಈಡೇರಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕದ ದಾವಣಗೆರೆ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಎಸ್.ಎಲ್. ಆನಂದಪ್ಪ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಯ ಆಯವ್ಯಯದಲ್ಲಿ ಸ್ಲಂ ನಿವಾಸಿಗಳು ನಿರೀಕ್ಷೆ ಮಾಡುವ ಬೇಡಿಕೆಗಳಾದ ವಸತಿ ಹಕ್ಕು ಖಾತ್ರಿ, ಸ್ಲಂ ಅಭಿವೃದ್ಧಿ ಮಸೂದೆ, ಸ್ಲಂ ಜನಸಂಖ್ಯೆಗೆ ಅನುಗುಣವಾಗಿ ಪಾಲು, ಲ್ಯಾಂಡ್ ಬ್ಯಾಂಕ್ ನೀತಿ, ನಿವೇಶನ ರಹಿತರ ಸಮಸ್ಯೆ, ನಗರ ಉದ್ಯೋಗ ಖಾತ್ರಿ, ಹಕ್ಕು ಪತ್ರ ಮತ್ತು ಕ್ರಯಪತ್ರಗಳ ತ್ವರಿತ ನೋಂದಣಿಗಳ ಬಗ್ಗೆ ಉಲ್ಲೇಖವಿರಲಿ ಪ್ರಸ್ತಾಪ ಕೂಡ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಸತಿ ಇಲಾಖೆಯ ಅಡಿಯಲ್ಲಿ ೬ನೇ ಗ್ಯಾರಂಟಿಯಾಗಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಫಲಾನುಭವಿ ವಂತಿಕೆಯನ್ನು ಪೂರ್ಣವಾಗಿ ಭರಿಸಲು ತೀರ್ಮಾನಿಸಿದ್ದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ೧೧೮೩೫೯ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಶೀಘ್ರವಾಗಿ ೪೮,೭೯೬ ಮನೆಗಳನ್ನು ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೇ ಫಲಾನುಭವಿ ವಂತಿಕೆಯನ್ನು ೧ಲಕ್ಷಕ್ಕೆ ಏರಿಕೆ ಮಾಡಿರುವುದು. ರಾಜ್ಯ ಕೊಳಗೇರಿ ಜನರ ಸರ್ವತೋಮುಖ ಅಭಿವೃದ್ಧಿಗೆ ಸರಿಸುಮಾರು ೧ ಸಾವಿರ ಕೋಟಿ ಬೇಕಾಗುತ್ತದೆ ಎಂದು ಹೇಳಿದರು.ರಾಜ್ಯದ ಆಯವ್ಯಯದಲ್ಲಿ ನಗರಗಳ ಜೀವನಾಡಿಯಾಗಿ ಕೊಳಗೇರಿಗಳಲ್ಲಿ ವಾಸ ಮಾಡುತ್ತಿರುವ ಜನಗಳಿಗೆ ಹಾಗೂ ಕೊಳಗೇರಿ ಪ್ರದೇಶಗಳ ಮೂಲ ಸೌಕರ್ಯನ್ನೊಳಗೊಂಡ ಅಭಿವೃದ್ಧಿಗೆ, ಕೊಳಗೇರಿ ನಿವಾಸಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಶೀಘ್ರವೇ ಅನುದಾನ ತೆಗೆದಿರಿಸಬೇಕೆಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ರೇಣುಕಾ ಯಲ್ಲಮ್ಮ, ಸಮಾಜ ಕಲ್ಯಾಣ ಇಲಾಖೆ ಅಡಿಯಲಬಜ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಉಪ ಹಂಚಿಕೆ ಅಡಿಯಲ್ಲಿ ೩೯ ಸಾವಿರ ಕೋಟಿ ನಿಗದಿ ಮಾಡಿದ್ದು ಇದು ನೇರವಾಗಿ ಕೈ ಸೇರಬೇಕಿದೆ. ಅಧಿಕಾರಿಗಳ ಜಾತಿ ತಾರತಮ್ಯ, ಬೇಜವಾಬ್ದಾರಿ ಮನೋಧೋರಣೆಯಿಂದಾಗಿ ಪ್ರತಿ ವರ್ಷ ಖರ್ಚಾಗಾದೆ ಉಳಿಕೆ ಆಗುತ್ತಿರುವ ಅನುದಾನದ ಬಳಕೆಯ ಬಗ್ಗೆ ಸರ್ಕಾರ ಗಮನ ವಹಿಸಬೇಕು, ಅಂತಹ ಅಧಿಕಾರಿಗಳ ಮೇಲೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯಿದೆಯ ಸೆಕ್ಷನ್ ೨೪ರ ಕರ್ತವ್ಯ ಲೋಪದಡಿಯಲ್ಲಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಶಬ್ಬೀರ್ ಸಾಬ್ , ಮಂಜುಳಾ, ಮಹಮ್ಮದ್ ಯೂಸುಫ್, ಮೆಹಬೂಬ್ ಸಾಬ್, ಜಂಶಿದಾಬಾನು ಇತರರು ಇದ್ದರು.