ಗ್ಯಾರಂಟಿ ಅರಿವು ಮೂಡಿಸಲು ಸಲಹೆ


ಸಂಜೆವಾಣಿವಾರ್ತೆ
ಹರಪನಹಳ್ಳಿ.ಜ.28;- ಹರಪನಹಳ್ಳಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ಬಗ್ಗೆ ಮನೆ ಮನೆಗೆ ಅರಿವು ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಶಾಸಕಿ ಎಂ.ಪಿ.ಲತಾಮಲ್ಲಿಕಾರ್ಜುನ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಸಲಹೆ ನೀಡಿದರು.
ಅವರು ಪಟ್ಟಣದ ತಮ್ಮ ನಿವಾಸದ ಬಳಿ ಇರುವ ಕಾಂಗ್ರೆಸ್ ಭವನದಲ್ಲಿ ನೂತನವಾಗಿ ನೇಮಕಗೊಂಡ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಅಭಿನಂದಿಸಿ ಶನಿವಾರ ಮಾತನಾಡಿದರು.
ನಮ್ಮ ತಂದೆ ದಿ.ಎಂ.ಪಿ.ಪ್ರಕಾಶ ರವರು ಕೊನೆ ಕಾಲದಲ್ಲಿ ಸೇರಿಕೊಂಡ ಪಕ್ಷ ಕಾಂಗ್ರೆಸ್ ಆಗಿದ್ದು, ನಮ್ಮ ಸಹೋದರ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರರವರು ಸಹ ಇಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿದ್ದಾರೆ, ಅಂತಹ ಕಾಂಗ್ರೆಸ್ ಪಕ್ಷವನ್ನು ನಾನು ಯಾವತ್ತೂ ಬಿಟ್ಟು ಹೋಗಲ್ಲ ಎಂದು ಹೇಳಿದರು.
ನನಗೆ ಕೆಲವರು ಆರೋಪ ಮಾಡಿದಷ್ಟು ಡಬಲ್ ಶಕ್ತಿ ಬರುತ್ತದೆ, ನಾನು ಪಕ್ಷೇತರ ಗೆದ್ದರೂ ಕಾಂಗ್ರೆಸ್ಸೆ ಸೇರಿದ್ದೇನೆ , ಕಾಂಗ್ರೆಸ್ ಪಕ್ಷದ ಸಂಘಟನೆಗೆ ದುಡಿಯುತ್ತೇನೆ ಎಂದು ತಿಳಿಸಿದರು.
ಎಲ್ಲರೂ ನಮ್ಮವರೇ ಎಂದು ತಿಳಿದು ಕಾಂಗ್ರೆಸ್ ಪಕ್ಷ ಸಂಘಟಿಸಿ , ಎಲ್ಲಾ ಕಾರ್ಯಕರ್ತರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ ಎಂದು ಅವರು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹೇಳಿದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ ಸಿಟ್ಟಾದವರನ್ನು, ಬಿಟ್ಟು ಹೋದವರನ್ನು ಸೇರಿದಂತೆ ಎಲ್ಲರನ್ನು ಒಟ್ಟು ಗೂಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡೋಣ, ಮುಂಬರುವ ಲೋಕಸಭೆ, ಜಿ.ಪಂ ಹಾಗೂ ತಾ.ಪಂ ಚುನಾವಣೆ ಎದುರಿಸೋಣ ಎಂದ ಅವರು ಜಾತ್ಯಾತೀಯವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈದೂರು ಕುಬೇರಪ್ಪ ಮಾತನಾಡಿ ನನ್ನ ಮೇಲೆ ಅಭಿಮಾನ ಇಟ್ಟು ಚಿಗಟೇರಿ ಬ್ಲಾಕ್ ಗೆ ಅದ್ಯಕ್ಷರನ್ನಾಗಿ ಶಾಸಕರು ಮಾಡಿದ್ದಾರೆ, ಅವರ ನಂಬಿಕೆಗೆ ಕುಂದು ಬರದಂತೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಹೇಳಿದರು.
ಪುರಸಭಾ ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಸಾಹೇಬ್, ಮುಖಂಡ ಅಗ್ರಹಾರ ಅಶೋಕ ಮಾತನಾಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಶಾಸಕರ ಕೈ ಬಲಪಡಿಸಬೇಕು ಎಂದು ಹೇಳಿದರು.
ಪುರಸಭಾ ಸದಸ್ಯರುಗಳಾದ ಟಿ.ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿದಾದಾಪೀರ,ಉದ್ದಾರ ಗಣೇಶ, ಮುಖಂಡರಾದ ವಸಂತಪ್ಪ, ಟಿಎಚ್ಎಂ ಮಂಜುನಾಥ, ಮೈದೂರು ರಾಮಣ್ಣ, ಚಿಕ್ಕೇರಿ ಬಸಪ್ಪ, ಎಲ್.ಮಂಜನಾಯ್ಕ, ಎನ್.ಶಂಕರ, ಶಿವಕುಮಾರನಾಯ್ಕ, ಕಂಚಿಕೇರಿ ಅಂಜಿನಪ್ಪ, ಶಿವರಾಜ, ಮತ್ತೂರು ಬಸವರಾಜ ಇತರರು ಹಾಜರಿದ್ದರು.