ಗ್ಯಾರಂಟಿಗೆ ಷರತ್ತು ಅನ್ವಯ

ಬೆಂಗಳೂರು,ಮೇ.೧೬-ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿದ್ದ ಕಾಂಗ್ರೆಸ್ ಇದೀಗ ತನ್ನ ರಾಗವನ್ನು ಬದಲಿಸಿದೆ. ಪಕ್ಷ ನೀಡಿರುವ ಗ್ಯಾರಂಟಿಗಳಿಗೆ ಷರತ್ತು ಅನ್ವಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸುಳಿವು ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳಿಗೆ ಯಾವುದೇ ಷರತ್ತು ವಿಧಿಸದೇ ಎಲ್ಲರಿಗೂ ಉಚಿತ ಎಂದು ಕಾಂಗ್ರೆಸ್ ತಿಳಿಸಿತ್ತು. ಇದರ ಬೆನ್ನೆಲ್ಲೇ ಪರಮೇಶ್ವರ್ ಸುದ್ದಿಗಾರರಿಗೆ ಈ ವಿಷಯ ಬಹಿರಂಗ ಪಡಿಸಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ೫ ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡಿದ್ದೇವೆ. ಆದರೆ ಈ ಗ್ಯಾರಂಟಿಗಳಿಗೆ ಷರತ್ತು ಅನ್ವಯವಾಗಲಿದೆ. ಆದರೆ ಗ್ಯಾರಂಟಿಗಳನ್ನು ಈಡೇರಿಸಲು ಪಕ್ಷ ಬದ್ಧವಾಗಿದೆ ಎಂದರು.
ಗ್ರಾಮೀಣಾ ಭಾಗದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಶುಲ್ಕ ಪಾವತಿಸುವುದಿಲ್ಲ ಎಂದು ಜನರು ಹೇಳುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ಸಭೆಯಲ್ಲಿ ೫ ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.
ಸಂಬಂಧಪಟ್ಟ ಇಲಾಖೆ ಸಚಿವರು ಕುಳಿತು ಗ್ಯಾರಂಟಿ ಜಾರಿಗಳ ಬಗ್ಗೆ ಕೆಲಸ ಮಾಡುತ್ತೇವೆ. ಹಾಗೇ ನೀಡಿದರೆ ಎಲ್ಲರೂ ಸುಮ್ಮನೆ ತೆಗೆದುಕೊಳ್ಳುತ್ತಾರೆ ಗ್ಯಾರಂಟಿಗಳಿಗೆ ಮಾನದಂಡ ನಿಗದಿ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಸೂಸೂತ್ರವಾಗಿ ನಡೆಯಲಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆಯಲಾಗಿದೆ. ದೆಹಲಿಯಲ್ಲಿ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ಚರ್ಚೆ ನಡೆಸಿದರು. ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಹೇಳಿದರು.