ಗ್ಯಾರಂಟಿಗೆ ಶಹಬ್ಬಾಸ್

ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್.

ಬೆಂಗಳೂರು, ಫೆ. ೧೨- ರಾಜ್ಯ ಸರ್ಕಾರ ಭವಿಷ್ಯದತ್ತ ದೃಷ್ಟಿ ನೆಟ್ಟಿರುವ ಸರ್ಕಾರವಾಗಿದ್ದು, ಸರ್ಕಾರದ ಎಲ್ಲ ಯೋಜನೆಗಳು ರಾಜ್ಯದ ಸಮಸ್ತ ಜನತೆಯ ಪಾಲಿಗೆ ಸಂತೃಪ್ತಿಯ ಮತ್ತು ನೆಮ್ಮದಿಯ ನಾಳೆಗಳನ್ನು ತರುವ ಉದ್ದೇಶ ಹೊಂದಿವೆ. ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ನೀತಿಗಳಲ್ಲಿ ಹೊಸತನವನ್ನು ಅಳವಡಿಸಿಕೊಂಡು ಬರ ಪರಿಸ್ಥಿತಿ ನಡುವೆಯೂ ಸರ್ವಾಂಗೀಣ ಅಭಿವೃದ್ಧಿಯತ್ತ ಮುನ್ನಡೆದಿದ್ದೇವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಒಳ್ಳೆಯ ಆಡಳಿತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆಗಳನ್ನು ಮೂಲ ಮಂತ್ರವನ್ನಾಗಿಸಿಕೊಂಡು, ಸುಲಲಿತ ಆಡಳಿತ ಆಶಯವನ್ನಾಗಿರಿಸಿಕೊಂಡಿರುವುದು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಕ್ರಾಂತಿಕಾರವಾದ ಹೆಜ್ಜೆಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.ರಾಜ್ಯ ಸರ್ಕಾರ ಅಭಿವೃದ್ಧಿಯ ಜಪ ಮಾಡಿದ್ದು, ಜತೆಗೆ ಗ್ಯಾರಂಟಿ ಯೋಜನೆಗಳ ಯಶೋಗಾಥೆಯನ್ನು ಹೇಳಿಸಿ, ಸರ್ವಜನಾಂಗದ ಶಾಂತಿಯ ತೋಟ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಧ್ಯೇಯ ವಾಕ್ಯಗಳನ್ನು ೮ ತಿಂಗಳ ಆಡಳಿತದಲ್ಲಿ ಸಮರ್ಥವಾಗಿ ಅನುಷ್ಠಾನ ಮಾಡಿರುವುದಾಗಿಯೂ ಹೇಳಿಕೊಂಡಿದೆ.
ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವ ಅಭಿವೃದ್ಧಿ ಎಂದು ಕರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅಶಕ್ತರಾಗಿ ಉಳಿದಿರುವ ಜನಸಮೂಹವನ್ನು ಇಡೀ ಆರ್ಥಿಕ ಬೆಳವಣಿಗೆಯಲ್ಲಿ ಭಾಗಿದಾರರನ್ನಾಗಿ ಮಾಡುವ ಅಗತ್ಯವಿದೆ. ಅಭಿವೃದ್ಧಿಯ ಸಹಜವಾಗಿಯೆ ಎಲ್ಲರಿಗೂ ಲಭಿಸುವ ಸಲುವಾಗಿ ಆರ್ಥಿಕ ಅಭಿವೃದ್ಧಿಯನ್ನು ನಿರೂಪಿಸಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳು ಈ ನಿಟ್ಟಿನಲ್ಲಿ ಒಂದು ಆರಂಭವಷ್ಟೇ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಯುವ ಜನತೆಗೆ ಉದ್ಯೋಗ ಲಭಿಸುವಂತಹ ಹೊಸ ಶಿಕ್ಷಣ ನೀತಿಯನ್ನು ರೂಪಿಸುವುದಾಗಿಯೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದು, ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ, ಕೈಗಾರಿಕೆ ಮತ್ತು ಸೇವಾ ರಂಗಗಳಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹಾಗೂ ಜೀವನ ಭದ್ರತೆ ಕಲ್ಪಿಸಲು ಅಗತ್ಯವಿರುವ ಕ್ರಮವನ್ನು ಕೈಗೊಂಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದ್ದು, ಕೊಟ್ಟ ವಚನಗಳನ್ನು ಪಾಲಿಸಿ ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಂಡಿದೆ. ಜನರ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸಿದೆ. ಹಾಗೆಯೇ ಬದಲಾವಣೆಯ ಗಾಳಿ ಬೀಸುವಂತೆಯೂ ಮಾಡಿ, ಸಂತಸದ ನೆಮ್ಮದಿಯ, ಸಂತೃಪ್ತಿಯ ಹೊಸ ಮನ್ವಂತರಕ್ಕೆ ಚಾಲನೆ ದೊರೆತಿದೆ ಎಂದು ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ಹೇಳಿದೆ.
ಕರ್ನಾಟಕ ಮಾದರಿ ಅಭಿವೃದ್ಧಿ ಇಡೀ ದೇಶವೇ ಅನುಸರಿಸಿರುವ ಅಭಿವೃದ್ಧಿ ಮಾದರಿಯಾಗಿದ್ದು, ಗೊಂದಲ, ಗೊಜಲುಗಳಿಗೆ ಅವಕಾಶ ಕೊಡದೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಸಾರ್ವತ್ರಿಕ ದಾಖಲೆ. ಈ ಬಗ್ಗೆ ದೇಶ ವಿದೇಶಗಳ ಮಾಧ್ಯಮಗಳು ಶ್ಲಾಘನೆ ಮಾಡಿವೆ. ಅಧ್ಯಯನಗಳನ್ನು ಮಾಡುತ್ತಿವೆ ಎಂದು ರಾಜ್ಯಪಾಲರು ಹೇಳಿ, ಈ ಮಾದರಿಯನ್ನು ಇನ್ನಷ್ಟು ಸಶಕ್ತಿಗೊಳಿಸಿ ಕರ್ನಾಟಕ ರಾಜ್ಯವನ್ನು ಇಡಿ ದೇಶದಲ್ಲೇ ವಿಶಿಷ್ಠವಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.
ಈ ಯೋಜನೆಗಳು ಒಂದು ಜಾತಿ, ಪ್ರದೇಶ, ಧರ್ಮಕ್ಕೆ ಅನ್ವಯವಾಗದೆ ನಾಡಿನಲ್ಲಿರುವ ಎಲ್ಲ ಜನತೆಯ ಅರ್ಹರಿರುವ ಜನರಿಗೆ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ತಲುಪುತ್ತಿವೆ. ಸಾರ್ವತ್ರಿಕ ಮೂಲ ಆದಾಯ ಎಂಬುದನ್ನು ಸರ್ಕಾರ ಬಾಯಿ ಮಾತಿನಲ್ಲಿ ಹೇಳದೆ ಅಕ್ಷರಶಃ ಅನುಷ್ಠಾನ ಮಾಡುತ್ತಿದೆ. ಇದರಿಂದ ಜನರಲ್ಲಿ ಒಂದು ಮಟ್ಟದ ನೆಮ್ಮದಿ ನೆಲಸಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ೧.೨ ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಹೊರ ಬಂದಿವೆ. ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ ೫ ಕೋಟಿಗೂ ಹೆಚ್ಚು ಜನರು ಮಧ್ಯ ವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಜನರ ಕೈಸೇರಿದ ಹಣ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ. ಒಂದೆಡೆ ರಾಜ್ಯಕ್ಕೆ ದೇಶಿಯ ಮತ್ತು ವಿದೇಶಿಯ ಹೂಡಿಕೆ ದೊಡ್ಡ ರೀತಿಯಲ್ಲಿ ಹರಿದು ಬರುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೊಳ್ಳುವ ಶಕ್ತಿಯೂ ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ೮ ತಿಂಗಳಿಂದ ಅಭಿವೃದ್ಧಿಯ ಹೊಸ ಶಕೆಯೆ ರಾಜ್ಯದಲ್ಲಿ ಆರಂಭವಾಗಿದೆ. ಈ ಅಭಿವೃದ್ಧಿಯನ್ನು ಮತ್ತಷ್ಟು ಎತ್ತರಕ್ಕೆ ಹೊಯ್ಯುವುದಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಕೇಂದ್ರದಿಂದ ಅನ್ಯಾಯ ಪರೋಕ್ಷ ಪ್ರಸ್ತಾಪ ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ಕೇಂದ್ರದಿಂದ ತೆರಿಗೆ ಪಾಲಿನ ಕಡಿತ ಹಾಗೂ ಅನುದಾನ ತಾರತಮ್ಯದ ಬಗ್ಗೆಯೂ ಪರೋಕ್ಷವಾಗಿ ಪ್ರಸ್ತಾಪಿಸಿ, ಸರ್ಕಾರ ಇನ್ನಷ್ಟು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಲು ಸಿದ್ಧವಿದೆ. ಆದರೆ, ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿಕೊಡುವ ೨ನೇ ರಾಜ್ಯ ಕರ್ನಾಟಕವಾಗಿದೆ. ಆದರೆ, ತೆರಿಗೆ ಪಾಲು ಪಡೆಯುವ ವಿಚಾರದಲ್ಲಿ ೧೦ ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಲಾದ ಪಾಲನ್ನು ಪಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಹೇಳುವ ಮೂಲಕ ಕೇಂದ್ರದಿಂದ ಅನುದಾನ ಪಡೆಯುವ ಹೋರಾಟದ ಅಂಶವನ್ನು ಪರೋಕ್ಷವಾಗಿ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿದೆ.
ಬರ ನಿರ್ವಹಣೆ ಸಮರ್ಥನೆ
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ಬರ ನಿರ್ವಹಣೆಯನ್ನು ಸಮರ್ಥವಾಗಿ ಮಾಡಲಾಗುತ್ತಿದೆ ಎಂಬುದನ್ನು ಹೇಳಿದ್ದು, ಬರ ಪರಿಹಾರ ಕ್ರಮಗಳಿಗಾಗಿ ೩೧ ಜಿಲ್ಲೆಗಳಲ್ಲಿ ೩೨೪ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿ ಪರಿಹಾರವಾಗಿ ೨ ಸಾವಿರ ರೂ.ಗಳಂತೆ ೩೨.೫೦ ಲಕ್ಷ ರೈತರಿಗೆ ೬೧೭ ಕೋಟಿ ರೂ.ಗಳ ಇನ್‌ಫುಟ್ ಸಬ್ಸಿಡಿ ಪಾವತಿಸಿರುವುದಾಗಿಯೂ ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ.
ಬರ ಪರಿಹಾರವಿರಲೀ, ಗ್ಯಾರಂಟಿ ಯೋಜನೆಗಳಿರಲಿ ಇವುಗಳನ್ನು ಸರ್ಕಾರ ಹಕ್ಕುಗಳು ಎಂದು ಭಾವಿಸಿಯೇ ಕಾರ್ಯನಿರ್ವಹಿಸುತ್ತಿದೆ. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ರಸ್ತೆ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು, ಮೆಟ್ರೋ ರೈಲು ಮಾರ್ಗಗಳ ಅಭಿವೃದ್ಧಿ, ಜಲಸಂಪನ್ಮೂಲ ಇಲಾಖೆಯಲ್ಲಿ ಆಗಿರುವ ಪ್ರಗತಿ, ಸಾರಿಗೆ ಸಂಪರ್ಕಕ್ಕೆ ನೀಡಿರುವ ಒತ್ತು, ಬಂಡವಾಳ ಹೂಡಿಕೆಗೆ ಕೈಗೊಂಡಿರುವ ಕ್ರಮಗಳು, ಪ್ರವಾಸೋದ್ಯಮಕ್ಕೆ ಹೊಸದಾಗಿ ರೂಪಿಸಿರುವ ನೀತಿ ಇದ್ದು,, ಶಿಕ್ಷಣಕ್ಕೂ ಸರ್ಕಾರ ಆದ್ಯತೆ ನೀಡಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಉಚಿತ ಕುಡಿಯುವ ನೀರು, ಉಚಿತ ವಿದ್ಯುತ್ ನೀಡಿರುವುದನ್ನು ಪ್ರಸ್ತಾಪಿಸಲಾಗಿದೆ.
ಇದರ ಜತೆಗೆ ಭಾರತದ ಸಂವಿಧಾನದ ಬ ಗ್ಗೆ ಅರಿವು ಮೂಡಿಸಲು ಕೈಗೊಂಡಿರುವ ಕ್ರಮಗಳು, ನಿತ್ಯ ಶಾಲೆಗಳಲ್ಲಿ ಸಂವಿಧಾನಪೀಠಿಕೆ ಓದು, ಶಾಲೆಗಳಿಗೆ ಶೌಚಾಲಯ ಸೌಲಭ್ಯ ಈ ಎಲ್ಲ ಅಂಶಗಳು ರಾಜ್ಯಪಾಲರ ಭಾಷಣದಲ್ಲಿದೆ.
ಬಸವಣ್ಣ ಸಾಂಸ್ಕೃತಿಕ ನಾಯಕ
ಸಮ ಸಮಾಜ ನಿರ್ಮಾಣ ಮತ್ತು ಧಮನಿತರಲ್ಲಿ ಆತ್ಮವಿಶ್ವಾಸ ತುಂಬಿ, ಸಾಮಾಜಿಕ, ಧಾರ್ಮಿಕ ಕ್ರಾಂತಿಯ ವಿಶ್ವಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವ ಅಂಶವನ್ನು ರಾಜ್ಯಪಾಲರುತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಪ್ರಗತಿ, ಆರೋಗ್ಯ ಇಲಾಖೆಯ ಸಾಧನೆಗಳು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಪರಿಶಿಷ್ಟ ಜಾತಿ, ವರ್ಗಗಳಿಗೆ ಜಾರಿ ಮಾಡಿರುವ ಯೋಜನೆಗಳು ಎಲ್ಲವನ್ನು ರಾಜ್ಯಪಾಲರ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರಾ
ಕರ್ನಾಟಕ ರಾಜ್ಯ, ರಾಷ್ಟ್ರದಲ್ಲೇ ಒಂದು ಮಾದರಿ ರಾಜ್ಯ. ಕರ್ನಾಟಕ ಸರ್ಕಾರದ ಯೋಜನೆಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಜನಮಾನಸಕ್ಕೆ ತಲುಪಿಸಲು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸೋಣ. ಕರ್ನಾಟಕವನ್ನು ಸಮೃದ್ಧಿಯ ರಾಜ್ಯ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸೋಣ ಎಂದು ರಾಜ್ಯಪಾಲರು ಕರೆ ನೀಡಿದ್ದಾರೆ.